ಶಿವಮೊಗ್ಗ :- ಹಿಂದಿನ ತಲೆಮಾರಿನವರು ನಡೆಸಿದ ಹೋರಾಟಗಳ ಫಲವಾಗಿ ಇಂದು ಹಲವು ಸೌಲಭ್ಯಗಳನ್ನು ಅನುಭವಿಸುತ್ತಿದ್ದೇವೆ. ಹೀಗಾಗಿ ಹೋರಾಟಗಳ ಇತಿಹಾಸ ಮತ್ತು ಮಹತ್ವವನ್ನು ಯುವಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವತಿಯಿಂದ ಕನ್ನಡ ಸಂಘರ್ಷ ಸಮಿತಿಯ 48ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಮಿತಿಯ ಸಂಸ್ಥಾಪಕ ಕಲ್ಲೂರು ಮೇಘರಾಜ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
1979ರ ನವೆಂಬರ್ 20ರಂದು ಬೆಂಗಳೂರಿನಲ್ಲಿ ಕನ್ನಡ ಮಾಧ್ಯಮದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಆಗ್ರಹಿಸಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ದೇ.ಜ.ಗೌ. ಮತ್ತು ಸಿದ್ದಯ್ಯ ಪುರಾಣಿಕ್ ಅವರೊಂದಿಗೆ ಮೇಘರಾಜ್ ಭಾಗವಹಿಸಿದ್ದರು. ಕನ್ನಡಕ್ಕಾಗಿ ಅವರ ಹೋರಾಟ ಸ್ಮರಣೀಯ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಿ ಹೋರಾಟಗಳು ನಿರಂತರವಾಗಿರಬೇಕು. ರೈಲ್ವೆ ಯೋಜನೆ, ಆಯುಷ್ ವಿಶ್ವವಿದ್ಯಾಲಯ ಹಾಗೂ ಬಡವರ ಸಮಸ್ಯೆಗಳ ಬಗ್ಗೆ ಅವರು ತೋರುತ್ತಿರುವ ಕಾಳಜಿ ಶ್ಲಾಘನೀಯ ಎಂದರು.
ಮಾಜಿ ಶಾಸಕ ಬಿ. ಸ್ವಾಮಿರಾವ್ ಮಾತನಾಡಿ, ಅಧಿಕಾರ, ಪ್ರಶಸ್ತಿ ಮತ್ತು ಪ್ರಚಾರದ ಆಸೆಯಿಲ್ಲದೆ ಮೇಘರಾಜ್ ಹಲವು ವರ್ಷಗಳಿಂದ ಅನ್ಯಾಯದ ವಿರುದ್ಧ ಹೋರಾಡುತ್ತಿದ್ದಾರೆ. ಬಗರ್‌ಹುಕುಂ ಹೋರಾಟದಲ್ಲಿ ಜಿಲ್ಲೆಯಾದ್ಯಂತ ಜನರನ್ನು ಸಂಘಟಿಸಿ ಪ್ರಮುಖ ಪಾತ್ರ ವಹಿಸಿದ್ದರು. ಹೋರಾಟಗಳ ಫಲವಾಗಿ ರಾಜ್ಯದಲ್ಲಿ ಸುಮಾರು 8 ಸಾವಿರ ಹಕ್ಕುಪತ್ರಗಳನ್ನು ವಿತರಿಸಲು ಸಾಧ್ಯವಾಗಿದೆ ಎಂದರು.
ಸಾಹಿತಿ ಡಾ. ಶ್ರೀಪತಿ ಹಳಗುಂದ ಮಾತನಾಡಿ, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಮಕ್ಕಳ ಶಿಕ್ಷಣ ಹಾಗೂ ದೈನಂದಿನ ವ್ಯವಹಾರಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು. ಪ್ರಶ್ನಿಸುವ, ಪ್ರತಿಭಟಿಸುವ ಮತ್ತು ಪ್ರತಿರೋಧಿಸುವ ಮನೋಭಾವವೇ ಸಮಾಜದ ಶಕ್ತಿ. ಹೋರಾಟಗಳು ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗದೆ ಜನಹಿತಕ್ಕಾಗಿ ನಡೆಯಬೇಕು ಎಂದರು.
ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ರಾಮಕೃಷ್ಣ,ಹಿರಿಯ ಸಮಾಜವಾದಿ ಪಿ. ಪುಟ್ಟಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಾಣಿರಾಜಪ್ಪ, ಪದ್ಮನಾಭ, ಕೃಷ್ಣಪ್ಪ ಇದ್ದರು.


