<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಶಿವಮೊಗ್ಗದಲ್ಲಿ ಧಾರ್ಮಿಕ ಹಾಗೂ ಅರ್ಥಪೂರ್ಣವಾಗಿ ನಡೆದ ಡಿಸಿಎಂ ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ

Banner Ad
ಶಿವಮೊಗ್ಗದಲ್ಲಿ ಧಾರ್ಮಿಕ ಹಾಗೂ ಅರ್ಥಪೂರ್ಣವಾಗಿ ನಡೆದ ಡಿಸಿಎಂ ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ

ಶಿವಮೊಗ್ಗ ;- ಈ ಹಿಂದೆ ಉಪಮುಖ್ಯಮಂತ್ರಿಗಳಾಗಿ ಅಪಾರ ಸೇವೆ ಸಲ್ಲಿಸಿದ ಕೆ.ಎಸ್. ಈಶ್ವರಪ್ಪನವರಿಗೆ ಮುಂದಿನ ದಿನದಲ್ಲಿ ಮತ್ತೊಮ್ಮೆ ಸರ್ಕಾರದ ನೇತೃತ್ವ ವಹಿಸುವ ಭಾಗ್ಯವನ್ನು ಪರಮಾತ್ಮ ಕರುಣಿಸಲಿ ಎಂದು ಉಡುಪಿ ಪೇಜವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗಳು ಹರಸಿದ್ದಾರೆ.

ನಗರದ ಕೆ.ಎಸ್. ಈಶ್ವರಪ್ಪ ಅಭಿಮಾನಿ ಬಳಗದ ಸಹಕಾರದೊಂದಿಗೆ ಶ್ರೀಗಂಧ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್‌ವತಿಯಿಂದ ಮಲ್ಲೇಶ್ವರ ನಗರದ ಕೆ.ಎಸ್. ಈಶ್ವರಪ್ಪನವರ ಮನೆಯ ಬಳಿ ಹಮ್ಮಿಕೊಂಡಿದ್ದ ಅವರ 78ನೇ ಹುಟ್ಟುಹಬ್ಬದ ಪ್ರಯುಕ್ತ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ರುದ್ರಪಠಣ, ಮಂಗಳನಿಧಿ ಸಮರ್ಪಣೆ, ಸಂಗೀತಾಭಿವಂದನೆ ಸಮೂಹ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಭಾಂಗಣ ಪ್ರವೇಶಿಸುವಾಗ ಫ್ಲೆಕ್ಸ್‌ನಲ್ಲಿ ಈಶ್ವರಪ್ಪನವರಿಗೆ 78ನೇ ಹುಟ್ಟುಹಬ್ಬ ಎಂದಿತ್ತು. ಎಲ್ಲೋ ಅದು ತಪ್ಪಾಗಿದೆ ಎಂದು ಅನಿಸಿತು. ಏಕೆಂದರೆ ಅವರು 24ರ ಯುವಕರಂತೆ ಸಮಾಜಕ್ಕಾಗಿ ಕ್ರೀಯಾಶೀಲರಾಗಿ ಬದುಕುತ್ತಿದ್ದಾರೆ. ಧರ್ಮದ, ಹಿಂದುತ್ವದ ಪ್ರಶ್ನೆ ಬಂದಾಗ ತನ್ನ ಹಿತವನ್ನು ಬಯಸದೆ ಸಮಾಜಕ್ಕಾಗಿ ಬದುಕುವುದೇ ನಿಜವಾದ ಬದುಕು ಎಂದು ತಿಳಿದು ಸಾಂಸ್ಕತಿಕ, ಸಾಮಾಜಿಕ ಹಾಗೂ ಧಾರ್ಮಕ ಕಾರ್ಯಕ್ರಮಗಳನ್ನು ಮಾಡುತ್ತಾ ಸಮಾಜದೊಂದಿಗೆ ಬೆರೆತು ಜೀವನ ನಡೆಸುತ್ತಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಭಗವಂತ ಅವರಿಗೆ ಆಯಸ್ಸು, ಆರೋಗ್ಯ, ಸುಖ-ಸಂತೋಷ ಎಲ್ಲವನ್ನು ಕರುಣಿಸಲಿ ಎಂದು ಆಶೀರ್ವದಿಸಿದರು.

ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಶ್ರೀಗಳು, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು, ಆದಿ ಚುಂಚನಗಿರಿ ಶಾಖಾ ಮಠದ ನಾದಮಯಾನಂದನಾಥ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಮಂಗಳನಿಧಿಯನ್ನು ಸ್ವೀಕರಿಸಿದ ಆರ್‌ಎಸ್‌ಎಸ್ ಮುಖಂಡ ಪಟ್ಟಾಭಿ ಮಾತನಾಡಿ, ಈಶ್ವರಪ್ಪನವರಿಗೆ 82ನೇ ವರ್ಷಕ್ಕೆ ಸಹಸ್ರ ಚಂದ್ರ ದರ್ಶನ ಶಾಂತಿಯೂ ಆಗಲಿ. ಹಿಂದುತ್ವ, ಸಂಘನಿಷ್ಠೆ, ದೇಶ ಮತ್ತು ಗುರುಗಳ ವಿಷಯದಲ್ಲಿ ಅವರು ಎಂದೂ ರಾಜೀಮಾಡಿಕೊಂಡಿಲ್ಲ. ಅವರ ಇಡೀ ಜೀವನದ ಯಶಸ್ಸಿನ ಸಿಂಹಪಾಲು ಅವರ ಶ್ರೀಮತಿಗೆ ಸಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಾತೆಯರಿಂದ ಭಕ್ತಿಗೀತೆ ಮತ್ತು ದೇಶಭಕ್ತಿಗೀತೆ, ಸಾಮೂಹಿಕ ಗಾಯನ ನಡೆಯಿತು.  ಈ ಸಂದರ್ಭದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಉತ್ತರ ಕರ್ನಾಟಕ ಭಾಗದ ಹಲವಾರು ಶ್ರೀಗಳು, ಪ್ರಮುಖರಾದ ಎಂಎಲ್‌ಸಿ ಡಿ.ಎಸ್. ಅರುಣ್, ಬಿ.ಕೆ. ಮೋಹನ್‌ಕುಮಾರ್, ಶ್ರೀಗಂಧ, ರಾಷ್ಟ್ರಭಕ್ತರ ಬಳಗ, ಗೋವರ್ಧನ ಟ್ರಸ್ಟ್ ಹಾಗೂ ಭಜನಾ ಪರಿಷತ್‌ನ ಪದಾಧಿಕಾರಿಗಳು ಮತ್ತು ಈಶ್ವರಪ್ಪನವರ ಅಪಾರ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು ಭಾಗವಹಿಸಿದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *