
ಶಿವಮೊಗ್ಗ :- ಚಿನ್ನಿಕಟ್ಟೆ ಜೋಗ ಎಂದೇ ಹೆಸರು ವಾಸಿಯಾಗಿರುವ ಶಿಕಾರಿಪುರ ರಸ್ತೆಯ ಈ ಊರಿನ ಸರ್ಕಲ್ ನಿಂದ ಎಡ ಭಾಗದಲ್ಲಿ ಸಾಗಿದರೆ ಸಿಗುವ ಇಲ್ಲಿನ ಪ್ರಸಿದ್ದ ಸಂತ ಸೇವಾಲಾಲ್ ಮಹಾರಾಜರ ಜನ್ಮಸ್ಥಳ. ಈ ದಾರಿಯಲ್ಲಿ ಸಿಗುವ ಸೂರಗೊಂಡನ ಕೊಪ್ಪ ಗ್ರಾಮದಲ್ಲಿ ಮೊದಲ ಭಾರಿಗೆ ಚಿರತೆ ಪ್ರತ್ಯಕ್ಷವಾಗಿದೆ.
ನಿನ್ನೆ ಬೆಳಿಗ್ಗೆ 11ರ ಸುಮಾರಿಗೆ ರೈತನೋರ್ವ ಹೊಲಕ್ಕೆ ಕೆಲಸ ಕಾರ್ಯಗಳಿಗೆ ಹೋದ ಸಂದರ್ಭದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಆತ ಗಾಭರಿಯಾಗಿ ಊರಿನೊಳವೆ ಬಂದು ಮಹಿತಿ ನೀಡಿದ್ದಾನೆ. ವಿಷಯ ತಿಳಿದ ಇತರೆ ರೈತರು ಹೊಲದಲ್ಲಿ ಕೆಲಸ ಮಾಡುವಾಗಲೇ ಗಾಭರಿಗೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸೂರಗೊಂಡನಕೊಪ್ಪದ ಕೆಲ ಜಮೀನುಗಳು, ಅಡಕೆ ತೋಟಗಳು ಬೆಟ್ಟದ ತಪ್ಪಲಿನಲ್ಲಿದ್ದು, ಈ ಭಾಗದಲ್ಲಿ ಚಿರತೆ ಆಹಾರ ಹುಡುಕುತ್ತ ಬಂದಿದೆ. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಚಿರತೆಯನ್ನು ಪ್ರತ್ಯಕ್ಷವಾಗಿ ಕಂಡ ರೈತ ಗಾಭರಿಯಾಗಿ ವಿಷಯ ತಿಳಿಸಿದ್ದಾನೆ.
ಸದ್ಯ ಊರಿನಲ್ಲಿ ಜನರು ಆತಂಕಗೊಂಡು ಜಮೀನು, ತೋಟಗಳ ಕಡೆ ತಲೆ ಕೂಡ ಹಾಕುತ್ತಿಲ್ಲ ಎಂಬ ಮಾಹಿತಿ ಬಂದಿದೆ. ಇಷ್ಟಾದರೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರೂ ಇನ್ನೂ ಇತ್ತ ಗಮನಹರಿಸಿಲ್ಲವೆಂದು ಗ್ರಾಮದ ಪ್ರಮುಖರು ತಿಳಿಸಿದ್ದಾರೆ.
ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಚಿರತೆಯ ಚಲನವಲನಗಳನ್ನು ಗಮಿಸಿ, ಅರಣ್ಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಚಿರತೆಯನ್ನು ಹಿಡಿದು ಕಾಡಿಗೆ ಬಿಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.



