
ಶಿವಮೊಗ್ಗ :- ನಗರದ ಪ್ರತಿಷ್ಠಿತ ಸರ್ಜಿ ಫೌಂಡೇಶನ್ ಮತ್ತು ಜೆಸಿಐ ಶಿವಮೊಗ್ಗ ಮಲ್ನಾಡ್ ನಿಂದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಆಕಾಂಕ್ಷಿಗಳಿಗೆ ಜು. 1ರಂದು ಕುವೆಂಪು ರಂಗಮಂದಿರದಲ್ಲಿ ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಉಚಿತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಸರ್ಜಿ ಫೌಂಡೇಶನ್‌ನ ಮುಖ್ಯಸ್ಥ ಹಾಗೂ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮುಂದಿನ ದಿನಗಳಲ್ಲಿ ನಡೆಯಲಿರುವ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿರುವ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ನೆರವಾಗುವ ಉದ್ದೇಶದಿಂದ ಆಯೋಜಿಸಲಾಗಿದೆ. ಕಾರ್ಯಾಗಾರದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತಜ್ಞರಾದ ಸೋಮಪ್ಪಡುಂಡಿಗೆರೆ ಮತ್ತು ನಾಗರಾಜ್ ರೆಡ್ಡಿ ಅವರ ನೇತೃತ್ವದಲ್ಲಿ ಇತ್ತೀಚಿನ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ ಮತ್ತು ದೈಹಿಕ ಪರೀಕ್ಷೆ ನಡೆಸುವ ಪದ್ಧತಿ. ಪಠ್ಯಕ್ರಮದ ವಿಶ್ಲೇಷಣೆ, ಪರೀಕ್ಷೆಗಳನ್ನು ಎದುರಿಸಲು ಅಭ್ಯರ್ಥಿಗಳು ಅನುಸರಿಸಬೇಕಾದ ಸುಲಭ ತಂತ್ರಗಳು, ಪ್ರಸ್ತುತ ಜಗತಿಕ ಸ್ಪರ್ಧೆಯ ವಾಸ್ತವತೆಗಳು ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿನ ಇತ್ತೀಚಿನ ಬದಲಾವಣೆಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಸಮಗ್ರ ಮಾಹಿತಿ ನೀಡಲಾಗುವುದು ಎಂದರು.
ಕಾಯಕಸೇತು ಪರೀಕ್ಷಾಪಥ ಎಂಬ ಶೀರ್ಷಿಕೆಯಡಿ ೩೦ದಿನಗಳ ಉಚಿತ ಆನ್‌ಲೈನ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮ ಲೋಕಾರ್ಪಣೆಯಾಗಲಿದ್ದು. ಇದು ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ನಿಟ್ಟಿನಲ್ಲಿ 30 ದಿನಗಳ ಆನ್‌ಲೈನ್ ತರಬೇತಿಯು ಮುಂಬರುವ ಜೂ. 29 ಆರಂಭವಾಗಲಿದ್ದು. ಈ ತರಬೇತಿಯಲ್ಲಿ ಪ್ರತಿದಿನ ಬೆಳಿಗ್ಗೆ 2ಗಂಟೆ ಮತ್ತು ಸಂಜೆ 2ಗಂಟೆಗಳ ಕಾಲ ನುರಿತ ಉಪನ್ಯಾಸಕರಿಂದ ಬೋಧನೆ ನೀಡಲಾಗುವುದು ಎಂದರು.
ವಿದ್ಯಾರ್ಥಿಗಳ ನಿರಂತರ ಮಲ್ಯಮಾಪನ ಹಾಗೂ ಸಮಯ ನಿರ್ವಹಣಾ ಕೌಶಲ್ಯ ಹೆಚ್ಚಿಸಲು ಪ್ರತಿದಿನ ಮತ್ತು ವಾರಕ್ಕೊಮ್ಮೆ ಟೆಸ್ಟ್ ಸೀರೀಸ್ ನಡೆಸಲಾಗುತ್ತದೆ. ಜೊತೆಗೆ, ಭಾಗವಹಿಸುವ ಅಭ್ಯರ್ಥಿಗಳಿಗೆ ಸುಲಭವಾಗಿ ಓದಲು ಅನುಕೂಲವಾಗುವಂತೆ ಸಮಗ್ರ ‘ಸ್ಟಡಿ ಮೆಟೀರಿಯಲ್’ (ಕ್ಲಾಸ್ ನೋಟ್ಸ್) ಅನ್ನು ಡಿಜಿಟಲ್ ರೂಪದಲ್ಲಿ ಉಚಿತವಾಗಿ ಒದಗಿಸಲಾಗುತ್ತದೆ ಎಂದರು.
ಅಚೀವರ್ಸ್ ಕೋಚಿಂಗ್ ಸೆಂಟರ್‌ನ ವರುಣ್, ಜೆ.ಸಿ.ಐ ಶಿವಮೊಗ್ಗ ಮಲ್ನಾಡ್ ಅಧ್ಯಕ್ಷ ಘನಶ್ಯಾಮ್ ಜಿ. ಗಿರಿಮಾಜಿ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ಕಾರ್ಯಾಧ್ಯಕ್ಷ ವಿಕಾಸ್ ಹೆಗ್ಡೆ, ಪೂರ್ವ ವಲಯ ಅಧಿಕಾರಿ ಕಿರಣ್ ಕುಮಾರ್, ಪ್ರಮುಖರಾದ ಹರ್ಷ ಕಾಮತ್, ಶಂಕರ್ ಸರ್ಜಿ, ಬಾಳೆಕಾಯಿ ಮೋಹನ್ ಇನ್ನಿತರರಿದ್ದರು.


