ಶಿವಮೊಗ್ಗ :- ಘನತೆಯಿಂದ ಸಮಾಜದ ಒಳಿತಿಗಾಗಿ ದುಡಿಯು ತ್ತಿರುವ ಕುಶಲಕರ್ಮಿಗಳ ಕರಕುಶಲ ಪರಂಪರೆಯನ್ನು ಉಳಿಸುವುದರ ಜೊತೆಗೆ, ಗ್ರಾಮೀಣ ಹಾಗೂ ಸಾಂಪ್ರದಾಯಿಕ ಕುಶಲಕರ್ಮಿಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಅತಿ ಮುಖ್ಯವಾಗಿದೆ ಎಂದು ಎನ್‌ಇಎಸ್ ಸಂಸ್ಥೆಯ ಜಂಟಿ ನಿರ್ದೇಶಕ ಡಾ. ಪಿ. ನಾರಾಯಣ್ ಹೇಳಿದರು.
ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಅಧೀನದ ಬೆಂಗಳೂರಿನ ಎಂಎಸ್‌ಎಂಇ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಜೆಎನ್‌ಎನ್‌ಸಿಇ ಕಾಲೇಜಿನ ಸಹಯೋಗದಲ್ಲಿ ಇಂದು ಜೆಎನ್‌ಎನ್‌ಸಿಇ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವಕರ್ಮ ಯೋಜನೆಯಡಿ ಬ್ರಾಂಡಿಂಗ್ ಮತ್ತು ಮಾರ್ಕೆಟಿಂಗ್’ ಕುರಿತಾದ ಒಂದು ದಿನದ ಜಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಪ್ರದಾಯಿಕ ಕುಶಲಕರ್ಮಿಗಳು ಹಾಗೂ ಕರಕುಶಲ ವೃತ್ತಿದಾರರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಈ ಜಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೆಎನ್‌ಎನ್‌ಸಿಇ ಕಾಲೇಜು ಆರಂಭವಾಗಿ 46 ವರ್ಷಗಳಾಗಿದ್ದು, ಅನೇಕ ಅತ್ಯುತ್ತಮ ಇಂಜಿನಿಯರ್ ಗಳನ್ನು ಸೃಷ್ಟಿಸುತ್ತಾ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ವಿದ್ಯೆ ಜೊತೆ ವೃತ್ತಿ ಕೌಶಲ್ಯ ನೀಡಲು ಸಹ ಸಂಸ್ಥೆ ಮುಂದಾಗಿದೆ ಎಂದರು.
ಎಂಎಸ್‌ಎಂಇ ಡಿಎಫ್‌ಓ, ಸಹಾಯಕ ನಿರ್ದೇಶಕರಾದ ಶಿವಕುಮಾರ್ ಮಾತನಾಡಿ, ಪಿಎಂ ವಿಶ್ವಕರ್ಮ ಯೋಜನೆಯಡಿ ಕುಶಲಕರ್ಮಿಗಳಿಗೆ ರೂ. 3ಲಕ್ಷದವರೆಗೆ ಶೇ. 5ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರಕಲಿದೆ. ಪಿಎಂಇಜಿಪಿ ಯೋಜನೆಯಡಿ ಶೇ. 15ರಿಂದ 30ಸಬ್ಸಿಡಿಯೊಂದಿಗೆ ರೂ.15 ಲಕ್ಷದವರೆಗೆ ಸಾಲ ಸೌಲಭ್ಯ ದೊರೆಯಲಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸುರೇಶ್ ಕುಮಾರ್ ಮಾತನಾಡಿ, ಕುಶಲಕರ್ಮಿಗಳಿಗೆ ಬ್ರಾಂಡಿಂಗ್ ಮತ್ತು ಪ್ಯಾಕೇಜಿಂಗ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಜಗೃತಿ ಮೂಡಿಸುವುದಕ್ಕಾಗಿ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. ಇಂದು ಅನೇಕ ಕುಶಲಕರ್ಮಿಗಳು ತರಬೇತಿ ಪಡೆದು ಕುಶಲಕರ್ಮಿ ಎಂಬ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂದರು.
ಜೆಎನ್‌ಎನ್‌ಸಿಇ ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ್ ಮಾತನಾಡಿ, ವಿಶ್ವಕರ್ಮ ಉತ್ಪನ್ನಗಳ ರಫ್ತು ಪ್ರೋತ್ಸಾಹ ಮತ್ತು ಮಾರುಕಟ್ಟೆ ವಿಸ್ತರಣೆಗೆ ಈ ತರಬೇತಿ ಕಾರ್ಯಕ್ರಮವು ಅತ್ಯಂತ ಸಹಕಾರಿಯಾಗಲಿದ್ದು, ಬ್ರಾಂಡಿಂಗ್ ಮತ್ತು ಪ್ಯಾಕೇಜಿಂಗ್ ಬಗ್ಗೆ ಉತ್ತಮ ಮಾಹಿತಿ ಲಭಿಸಲಿದೆ. ಉತ್ಪಾದಕರು, ಉದ್ಯಮಿಗಳು ತಮ್ಮ ಉತ್ಪನ್ನಗಳಿಂದ ಲಾಭ ಪಡೆಯುವುದು ಹೇಗೆ ಮತ್ತು ಇತರರಿಗಿಂತ ಹೇಗೆ ಭಿನ್ನವಾಗಿದ್ದೇನೆ ಎಂಬುದನ್ನು ಕಂಡುಕೊಳ್ಳಬೇಕು. ಇಲ್ಲಿನ ಅನೇಕ ಸ್ಥಳೀಯ ಕೈಗಾರಿಕೆ ಗಳು ಅತ್ಯುತ್ತಮ ಸಾಧನೆ ಮಾಡಿವೆ. ಅತ್ಯಂತ ಸಣ್ಣ ಉತ್ಪನ್ನವಾದ ಸೇಫ್ಟಿ ಪಿನ್ ಹೆಚ್ಚಿನ ರಾಯಲ್ಟಿ ಪಡೆಯುತ್ತಿರುವ ಉತ್ಪನ್ನವಾಗಿದೆ ಎಂದರು.
ಅರುಣ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಯೋಜನೆಯಡಿ ನೋಂದಣಿಯಾಗಿ ತರಬೇತಿ ಪಡೆದು, ಪರೀಕ್ಷೆಯ ಮೂಲಕ ಅರ್ಹತೆ ಪಡೆದ ನಂತರ ಕಡಿಮೆ ಬಡ್ಡಿ ದರದಲ್ಲಿ ರೂ. 2ರಿಂದ 3ಲಕ್ಷ ಸಾಲ ಸೌಲಭ್ಯ, ೪ಸಾವಿರ ಸ್ಟೈಫಂಡ್ ಮತ್ತು ರೂ. 15 ಸಾವಿರ ಮಲ್ಯದ ಟೂಲ್ ಕಿಟ್ ನೀಡಿ ನಂತರ ಮುಂದುವರೆದ ತರಬೇತಿ ನೀಡಲಾಗುವುದು ಎಂದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಜೋಯ್ಸ್ ರಾಮಾಚಾರ್ ಅಧ್ಯಕ್ಷತೆ ವಹಿಸಿದ್ದರು. ಎಂಎಸ್‌ಎಂಇ ಡಿಎಫ್‌ಓ, ಸಹಾ ಯಕ ನಿರ್ದೇಶಕರಾದ ಮರೋತಿ ಸುಬೆ, ಲೀಡ್ ಬ್ಯಾಂಕ್ ಮ್ಯಾನೇಜರ್ ಹನುಮಂತಪ್ಪ, ಬ್ಯಾಂಕ್ ಅಧಿಕಾರಿಗಳು, ಕುಶಲಕರ್ಮಿಗಳು, ವಿದ್ಯಾರ್ಥಿಗಳು ಹಾಜರಿದ್ದರು.


