ಶಿವಮೊಗ್ಗ :- ಗೃಹ ಲಕ್ಷ್ಮಿ ಯೋಜನೆಯ 31 ನೇ ಕಂತು ಬಿಡುಗಡೆಯಾಗುತ್ತಿದ್ದು ಇನ್ನೊಂದೆರಡು ದಿನಗಳಲ್ಲಿ ಫಲಾನುಭವಿಗಳಿಗೆ ಹಣ ಜಮಾ ಆಗಲಿದೆ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್. ಚಂದ್ರಭೂಪಾಲ ತಿಳಿಸಿದರು.
ನಗರದ ಜಿಂ.ಪಂ. ಸಭಾಂಗಣದಲ್ಲಿ ರಾಜ್ಯ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ನಂತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವು ಯಶಸ್ವಿಯಾಗಿ ಮುನ್ನಡೆಯುತ್ತಿವೆ ಎಂದರು.
ಶಿವಮೊಗ್ಗ ಜಿಲ್ಲೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 31ನೇ ಕಂತಿನ ಹಣ ಬಿಡುಗಡೆಯಾಗಿದ್ದು ಜಿಲ್ಲೆಯ ಒಟ್ಟು 3,79,858 ಅರ್ಹ ಮಹಿಳಾ ಫಲಾನುಭವಿಗಳಿಗೆ ಈ ಕಂತಿನ ಲಾಭ ಸಿಗಲಿದೆ. ಒಟ್ಟು ರೂ. 75.97 ಕೋಟಿ ಹಣ ಬಿಡುಗಡೆ ಯಾಗಿದೆ. ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ತಲಾ 2ಸಾವಿರ ಹಣ ಮುಂದಿನ ಒಂದೆರಡು ದಿನಗಳಲ್ಲಿ ನೇರವಾಗಿ ಜಮೆಯಾಗಲಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 30 ಕಂತುಗಳಲ್ಲಿ ಡಿ.ಬಿ.ಟಿ. ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಒಟ್ಟು 3,110.48 ಕೋಟಿಗೂ ಅಧಿಕ ರೂಪಾಯಿ ಜಮೆಯಾಗಿದೆ.
ಮೃತರ ಖಾತೆಯಿಂದ ಹಣ ವಾಪಸ್: ಜಿಲ್ಲೆಯಲ್ಲಿ ಮರಣ ಹೊಂದಿದ 9,247 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ತಾಂತ್ರಿಕ ಕಾರಣಗಳಿಂದ ಅವರ ಖಾತೆಗೆ ಜಮೆಯಾಗಿದ್ದ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಪೈಕಿ ಈಗಾಗಲೇ 3,600 ಫಲಾನುಭವಿಗಳಿಂದ 3,79,82,000 ರೂ.ಗಳನ್ನು ಯಶಸ್ವಿಯಾಗಿ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿರುವ ಗ್ರಾಹಕರ ಮಾಹಿತಿ ಪರಿಶೀಲನಾ ಕಾರ್ಯವು ಜುಲೈ 1 ರಿಂದ ಆರಂಭವಾಗಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮನೆ ಬಾಗಿಲಿಗೆ ಮೆಸ್ಕಾಂ ಸಿಬ್ಬಂದಿ: ಮೆಸ್ಕಾಂ ಮೀಟರ್ ರೀಡರ್‌ಗಳು ಮತ್ತು ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಫಲಾನುಭವಿಗಳು ಈ ಸಮೀಕ್ಷೆಗಾಗಿ ಮೆಸ್ಕಾಂ ಕಚೇರಿಗೆ ಅಲೆಯುವ ಅಗತ್ಯವಿಲ್ಲ.
ಉಚಿತ ವಿದ್ಯುತ್ ಸ್ಥಗಿತವಾಗಲ್ಲ: ಈ ಸಮೀಕ್ಷೆಯು ಕೇವಲ ಫಲಾನುಭವಿಗಳ ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಚಂದ್ರಭೂಪಾಲ ಅವರು ತಿಳಿಸಿದರು.
ಪ್ರಾಧಿಕಾರದ ಉಪಾಧ್ಯಕ್ಷರಾದ ಎಂ.ಎಸ್. ಬಸವರಾಜಪ್ಪ, ಆರ್ ಶಿವಣ್ಣ, ಇಕ್ಕೇರಿ ರಮೇಶ್, ತಾಲ್ಲೂಕು ಅಧ್ಯಕ್ಷ ಮಧು ಹಾಗೂ ಸದಸ್ಯರಿದ್ದರು.


