ಶಿವಮೊಗ್ಗ:- ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಸುಮಾರು ೬ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಹುದ್ದೆಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ಈ ಬಾರಿ ಮಹಿಳೆಗೆ ಅವಕಾಶ ಕಲ್ಪಿಸಬೇಕು ಎಂಬ ವಿಚಾರ ಮುಂಚೂಣಿಯಲ್ಲಿದೆ. ಜಿಲ್ಲೆಯ ಇತಿಹಾಸದಲ್ಲೇ ಈವರೆಗೂ ಜಿಲ್ಲಾ ಕಾಂಗ್ರೆಸ್ಗೆ ಮಹಿಳಾ ಅಧ್ಯಕ್ಷರ ನೇಮಕ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಮಹಿಳೆಯೋರ್ವರಿಗೆ ಅವಕಾಶ ಕಲ್ಪಿಸಬೇಕು ಎಂಬುದು ಹಲವರ ಒತ್ತಾಸೆಯಾಗಿದೆ.
ಮುಖ್ಯವಾಗಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಶ್ರೀಮತಿ ವೇದಾ ವಿಜಯಕುಮಾರ್ ಅವರ ಹೆಸರು ಮುಂಚೂಣಿಯಲ್ಲಿ ಕಾಣಬರುತ್ತಿದೆ. ಈ ಹಿಂದೆ ಜಿಪಂಗೆ ಜರುಗಿದ ಚುನಾವಣೆಯಲ್ಲಿ ತಮ್ಮ ಎದುರಾಳಿಗಳಾಗಿದ್ದ ನಿಧಿಗೆ ಕುಟುಂಬದ ಬಿಜೆಪಿ ಅಭ್ಯರ್ಥಿ ಹಾಗೂ ಹೆಚ್ಎಂಸಿ ಕುಟುಂಬದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ ಹಿರಿಮೆ ವೇದಾ ವಿಜಯಕುಮಾರ್ ಅವರದ್ದಾಗಿದೆ.
ನಂತರ ನಡೆದ ವಿದ್ಯಮಾನಗಳು ವೇದಾ ವಿಜಯಕುಮಾರ್ ಅವರನ್ನು ಉತ್ತುಂಗದ ಸ್ಥಿತಿಗೆ ತಂದು ನಿಲ್ಲಿಸಿದ್ದನ್ನು ಮರೆಯಲಾಗದು. ಜಿಪಂನಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ಸಮಾನ ಸ್ಥಾನ ಗಳಿಸಿದ ಹಂತದಲ್ಲಿ ಒಂದು ಮತದ ಅಗತ್ಯತೆ ಎರಡೂ ಪ್ರಮುಖ ಪಕ್ಷಗಳಿಗಿತ್ತು. ವೇದಾ ವಿಜಯಕುಮಾರ್ ಅವರ ನಿರ್ಧಾರ ಅಂತಿಮವಾಗಿತ್ತು. ಬಿಜೆಪಿಯವರು ಅವರಿಗೆ ಅಧ್ಯಕ್ಷ ಸ್ಥಾನದ ಆಮಿಷ ಒಡ್ಡಿದ್ದರೂ ಅವರು ತಲೆಬಾಗಲಿಲ್ಲ. ಕಾಂಗ್ರೆಸ್ ಪರವಾಗಿ ಅವರು ಮತ ಚಲಾಯಿಸಿದರು. ಪರಿಣಾಮ ಜಿಪಂ ಅಧ್ಯಕ್ಷ ಗದ್ದುಗೆ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿತ್ತು. ವೇದಾ ವಿಜಯ ಕುಮಾರ್ ಜಿಪಂ ಉಪಾಧ್ಯಕ್ಷರಾಗಿ ಆಯ್ಕೆಯಾದದ್ದು ಒಂದು ಇತಿಹಾಸ.
ಜಿಪಂ ಉಪಾಧ್ಯಕ್ಷರಾದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಒತ್ತು ನೀಡುವ ಜೊತೆಗೆ ತಮ್ಮ ಹೊಸೂಡಿ ಕ್ಷೇತ್ರದ ಅಭಿವೃದ್ಧಿಗೆ ಇಂಬುನೀಡಿ ಜನರ ಮಧ್ಯೆಯೇ ನಿಂತು ಸೇವೆ ಸಲ್ಲಿಸುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಈಗಲೂ ಸಹ ಈ ಭಾಗದ ಜನತೆ ಅವರ ಸೇವೆಯನ್ನು ಮರೆತಿಲ್ಲ. ಇವರ ಅವಧಿಯಲ್ಲಿ ಹೊಸೂಡಿ ಜಿಪಂ ಕ್ಷೇತ್ರದಲ್ಲಿ ಪವರ್ ಸ್ಟೇಷನ್, ನೀರಿನ ಸಮಸ್ಯೆಗೆ ಪರಿಹಾರ, ಸುಮಾರು ೩೦ಕ್ಕೂ ಹೆಚ್ಚು ಸಮುದಾಯ ಭವನಗಳ ನಿರ್ಮಾಣ ಆಗಿರುತ್ತದೆ. ಹೀಗೆ ಜನಪರ ಕಾರ್ಯಗಳಲ್ಲಿ ಅತ್ಯುತ್ತಮ ಹೆಸರು ಸಂಪಾದಿಸಿದ ವೇದಾ ವಿಜಯಕುಮಾರ್ ಅವರು ಈ ಬಾರಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರೆ ಪಕ್ಷದ ಸಂಘಟನೆ ಜೊತೆಗೆ ಪಕ್ಷದ ಜನಪ್ರಿಯ ಕಾರ್ಯಕ್ರಮಗಳು ಜನರ ಸನಿಹ ತಲುಪುವುದು ಖಚಿತ. ಒಟ್ಟಾರೆ ವೇದಾ ವಿಜಯಕುಮಾರ್ ಓರ್ವ ದಕ್ಷ ಆಡಳಿತ ಅನುಭವ ಹೊಂದಿದ ಪ್ರಾಮಾಣಿಕ ರಾಜಕಾರಣಿ ಯಾಗಿದ್ದಾರೆ. ಎಲ್ಲರೊಡನೆ ಬೆರೆಯುವ ಸ್ವಭಾವ ಹೊಂದಿದ್ದಾರೆ.
ಇವರ ಪತಿ ವಿಜಯಕುಮಾರ್ ಆರ್. ದನಿ ಅವರೂ ಸಹ ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಿರಂತರ ಪರಿಶ್ರಮ ಹಾಕುತ್ತಿದ್ದಾರೆ. ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷರಾಗಿರುವ ಶ್ರೀಯುತರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ವಿಜಯಕುಮಾರ್ ದನಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅತ್ಯಾಪ್ತರಲ್ಲಿ ಓರ್ವರಾಗಿದ್ದಾರೆ. ಎಐಸಿಸಿಯಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೀಕ್ಷಕರಾಗಿ ಆಗಮಿಸಿರುವ ಶರತ್ ಅವರು ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ವಿಚಾರ ಮಾಡಿ ವೇದಾ ವಿಜಯಕುಮಾರ್ ಅವರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ಕಲ್ಪಿಸುವ ಮೂಲಕ ಶಿವಮೊಗ್ಗದ ಇತಿಹಾಸದಲ್ಲಿ ಮಹಿಳಾ ಅಧ್ಯಕ್ಷರನ್ನು ನೇಮಕ ಮಾಡಿದ ಕೀರ್ತಿಗೆ ಪಾತ್ರರಾಗಲಿ ಎಂಬುದು ಕಾಂಗ್ರೆಸ್ನ ಹಲವು ಪ್ರಮುಖರ ಅನಿಸಿಕೆ.


