ಶಿವಮೊಗ್ಗ :- ಶಿಕ್ಷಣದ ಮೂಲಕ ಸಮಾಜದ ಭವಿಷ್ಯ ಕಟ್ಟುವ ಮಹತ್ವದ ಕಾರ್ಯಕ್ಕೆ ಶತಮಾನಕ್ಕೂ ಹೆಚ್ಚು ಕಾಲದಿಂದ ಸಾಕ್ಷಿಯಾಗಿರುವ ಶಿವಮೊಗ್ಗದ ನಗರ ಡಿವಿಷನ್ ವೀರಶೈವ ವಿದ್ಯಾರ್ಥಿ ನಿಲಯ (ಎನ್.ಡಿ.ವಿ. ಹಾಸ್ಟೆಲ್) ಇದೀಗ ಆಧುನಿಕ ಸೌಲಭ್ಯಗಳೊಂದಿಗೆ ಹೊಸ ರೂಪ ಪಡೆಯಲು ಸಜ್ಜಾಗಿದೆ. ಹಳೆಯ ಕಟ್ಟಡ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವಸತಿ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಭವ್ಯ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದೆ. ಉದ್ಘಾಟನೆಗೆ ಸಕಲ ಸಿದ್ದತೆಗಳು ಪೂರ್ಣಗೊಂಡು ಕ್ಷಣಗಣನೆ ಆರಂಭವಾಗಿದೆ.
ಮಲೆನಾಡು ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಅವಕಾಶ ಕಲ್ಪಿಸುವ ದೂರದೃಷ್ಟಿಯಿಂದ ಈ ವಿದ್ಯಾರ್ಥಿ ನಿಲಯದ ಪರಂಪರೆ ಆರಂಭಗೊಂಡಿತ್ತು. 1916ರಲ್ಲಿ ಶಿವಮೊಗ್ಗದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಚಾಲನೆ ದೊರೆತಿದ್ದು, ಗ್ರಾಮೀಣ ಹಾಗೂ ದೂರದ ಪ್ರದೇಶಗಳಿಂದ ನಗರಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದ ವಿದ್ಯಾರ್ಥಿಗಳಿಗೆ ಇದು ಆಶ್ರಯದ ನೆಲೆಯಾಯಿತು.
ವೀರಶೈವ ವಿದ್ಯಾವರ್ಧಕ ಸಂಘದಿಂದ ವಸತಿ ನಿಲಯದ ಕಾರ್ಯನಿರ್ವಹಣೆ:
ನಗರ ಡಿವಿಜನ್ ವೀರಶೈವ ವಿದ್ಯಾರ್ಥಿ ನಿಲಯ ಟ್ರಸ್ಟ್ ಹಳೆ ತಾಲೂಕು ಕಛೇರಿ ರಸ್ತೆ, ಶಿವಮೊಗ್ಗ, ನೂತನ ಸುಸಜ್ಜಿತ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಹಾಕಾರ್ಯಕ್ಕೆ ಸಹಕರಿಸಲು ಸಮಾಜ ಬಾಂಧವರಲ್ಲಿ ಮನವಿ. 1916ರಲ್ಲಿ ವೀರಶೈವ ಸಮಾಜ ಶೈಕ್ಷಣಿಕವಾಗಿ ಮಾತ್ರವಲ್ಲದೆ ಹಲವು ವಿಚಾರಗಳಲ್ಲಿ ಹಿಂದುಳಿದಿತ್ತು. ಅದಕ್ಕೆ ಕಾರಣ ಸಮಾಜದಲ್ಲಿ ಬಹಳಷ್ಟು ವಿದ್ಯಾವಂತರು ಇಲ್ಲದಿರುವುದನ್ನು ಗಮನಸಿ ಈ ಲೋಪವನ್ನು ಹೋಗಲಾಡಿಸಲು ನಾವು ಯಾವುದೊಂದು ಉಪಾಯ ಕೈಗೊಳ್ಳಬೇಕೆಂದು ಆಗಿನ ಸಮಾಜದ ಸ್ವಾಮೀಜಿಗಳು ಹಾಗೂ ಗುರು ಹಿರಿಯರು ಚರ್ಚಿಸಿದ್ದರು. ವಿದ್ಯಾಭಿವೃದ್ಧಿಗೆ ಮಾಡಬೇಕಾದ ಸೌಕರ್ಯಗಳಲ್ಲಿ ಮುಖ್ಯವಾದುದು ವಿದ್ಯಾರ್ಥಿಗಳಿಗೆ ಅನ್ನದಾಸೋಹ ಮತ್ತು ಏಕಾಂತ ಪಾಠ ಅದಕ್ಕೆ ಅನುಕೂಲವಾಗುವ ‘ಸ್ಪೂಡೆಂಟ್ಸ್ ಹೋಮ್‘ ಅಂದರೆ ವಿದ್ಯಾರ್ಥಿ ನಿಲಯ ಆರಂಭಿಸಲು ನಿರ್ಧಿರಿಸಿದ್ದರು.
ಈ ವಿಷಯದಲ್ಲಿ ಅನಂತಪುರ ಮಠದ ಮಹಾಸ್ವಾಮಿಗಳಾದ ಶ್ರೀ ಮನ್ನಿರಂಜನ ಜಗದ್ಗುರು ಅವರು ಶಿವಮೊಗ್ಗದಲ್ಲಿ ಒಂದು ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಬೇಕೆಂದು, ಅಲ್ಲದೆ ಅದರ ಪೋಷಣೆಗಾಗಿ ಒಂದು ಫಂಡನ್ನು ಶೇಖರಿಸಬೇಕೆಂದು ಬಹು ದಿನಗಳಿಂದ ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ ಬಂದಿದ್ದರು. ಅಂದಿನ ಮೈಸೂರು ಮಹಾರಾಜರ ಸರ್ಕಾರ ಅ ವರ್ಷದ ಬಜೆಟ್ಟಿನಲ್ಲಿ ಹಿಂದುಳಿದ ಜನಾಂಗದ ಪ್ರೋತ್ಸಾಹಕ್ಕಾಗಿ ಒಂದು ಲಕ್ಷ ರೂ ನೀಡಲಾಗಿತ್ತು. ಆಗಿನ ಕಾಲಕ್ಕೆ ಅದೊಂದು ದೊಡ್ಡ ಮೊತ್ತವಾಗಿದ್ದು, ಉದ್ದೇಶ ಸಾಧನೆಗೆ ಚಾಲನೆ ನೀಡಿತು. ಈ ಉದ್ದೇಶವನ್ನು ಯಾವ ರೀತಿ ನೆರವೇರಿಸಬೇಕೆಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲು ವೀರಶೈವ ಮತಾಭಿಮಾನಿಗಳ ಸರ್ವರ ಸಮ್ಮೇಳನವನ್ನು ಸಂಘಟಿಸಿ, 23-9-1916ರಂದು ಆನಂತಪುರದ ಶ್ರೀ ಮನ್ನಿರಂಜನ ಜಗದ್ಗುರು ಲಿಂಗ ಮಹಾಸ್ವಾಮಿಗಳಾವರ ಅದ್ಯಕ್ಷತೆಯಲ್ಲಿ ಸಭೆ ಸೇರಿಸಿ,ನಗರ ಡಿವಿಜನ್ ವೀರಶೈವ ವಿದ್ಯಾವರ್ಧಕ ಸಂಘ ವನ್ನು ಸ್ಥಾಪಿಸಿ ಅದರ ಮೂಲಕ ಕಾರ್ಯಾನಿರ್ವಹಿಸಲು ನಿರ್ಧರಿಸಲಾಯಿತು.
ಶಿಥಿಲ ಕಟ್ಟಡಕ್ಕೆ ಬದಲಾಗಿ ಈಗ ಆಧುನಿಕ ಸೌಲಭ್ಯವುಳ್ಳ ಸುಸಜ್ಜಿತ ವಿದ್ಯಾ ಕೇಂದ್ರ:
ಪ್ರಸ್ತುತ ಪೀಠಾಧಿಕಾರಿಗಳಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ಹಳೆಯ ಕಟ್ಟಡ ಶಿಥಿಲಗೊಂಡು ವಿದ್ಯಾರ್ಥಿಗಳ ವಾಸಕ್ಕೆ ಸೂಕ್ತವಾಗದ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಶ್ರೀ ಆಯನೂರು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸ್ಥ ಮಂಡಳಿ ಸಭೆಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗಿದ್ದು, ಸಮಾಜದ ಪ್ರಮುಖರು, ವಿದ್ಯಾಪ್ರೇಮಿಗಳು ಹಾಗೂ ದಾನಿಗಳ ಸಹಕಾರ ಪಡೆಯಲು ಮುಂದಾಗಿದ್ದರು. ನೂತನ ಕಟ್ಟಡವು ಕೇವಲ ವಿದ್ಯಾರ್ಥಿಗಳ ವಸತಿ ಕೇಂದ್ರವಾಗಿರದೆ, ಅಧ್ಯಯನ, ತರಬೇತಿ ಮತ್ತು ವ್ಯಕ್ತಿತ್ವ ವಿಕಸನದ ಸಮಗ್ರ ಕೇಂದ್ರವಾಗುವ ಉದ್ದೇಶ ಹೊಂದಿದೆ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಅವಕಾಶ:
ಸುಮಾರು ೯ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಕಟ್ಟಡದಲ್ಲಿ ವಿಶಾಲ ಗ್ರಂಥಾಲಯ, ಪ್ರಾರ್ಥನಾ ಹಾಲ್, ಪ್ರಸಾದ ನಿಲಯ, ಆಧುನಿಕ ಅಡುಗೆ ಮನೆ ಹಾಗೂ ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗುವುದು. ಇದರ ಜೊತೆಗೆ ಕೆಎಎಸ್, ಯುಪಿಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ವಿಶಾಲವಾದ ತರಬೇತಿ ಹಾಗೂ ಅಧ್ಯಯನ ಹಾಲ್ ನಿರ್ಮಿಸುವ ಉದ್ದೇಶವೂ ಇದೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅವಕಾಶ ಕಲ್ಪಿಸುವ ಗುರಿ ಹೊಂದಲಾಗಿದೆ.
ಹಿರಿಯರ ಕನಸು ಸಾಕಾರಗೊಳಿಸುವ ಹೊಣೆ ನಮ್ಮದು: ಶಿವಮೊಗ್ಗದ ಶತಮಾನದ ವಿದ್ಯಾ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಇಂದಿನ ಸಮಾಜದ ಹೊಣೆಗಾರಿಕೆಯಾಗಿದೆ. ಒಂದು ಕಾಲದಲ್ಲಿ ಹಿರಿಯರು ತಮ್ಮ ತನು-ಮನ-ಧನವನ್ನು ಅರ್ಪಿಸಿ ನಿರ್ಮಿಸಿದ ಈ ಸಂಸ್ಥೆ ಇಂದು ಹೊಸ ಸವಾಲುಗಳ ನಡುವೆ ಹೊಸ ಪೀಳಿಗೆಯನ್ನು ರೂಪಿಸುವ ಅಗತ್ಯ ಎದುರಿಸುತ್ತಿದೆ. ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಸುರಕ್ಷಿತ ವಸತಿ, ಅಧ್ಯಯನದ ವಾತಾವರಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ದೊರಕಬೇಕು. ಈ ಉದ್ದೇಶದಿಂದ ನಿರ್ಮಾಣಗೊಳ್ಳಲಿರುವ ನೂತನ ವಿದ್ಯಾರ್ಥಿ ನಿಲಯಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸುವುದು, ಹಿರಿಯರು ಕಟ್ಟಿಕೊಟ್ಟ ವಿದ್ಯಾ ಪರಂಪರೆಗೆ ಸಲ್ಲಿಸುವ ಗೌರವವಾಗಲಿದೆ.
ನಾವು ನೀಡುವ ದೇಣಿಗೆ ಕೇವಲ ಕಟ್ಟಡ ನಿರ್ಮಿಸುವುದಿಲ್ಲ; ಅದು ಒಬ್ಬ ವಿದ್ಯಾರ್ಥಿಯ ಕನಸಿಗೆ ರೆಕ್ಕೆ ನೀಡುತ್ತದೆ. ಇಂದು ನಾವು ಮಾಡುವ ಸಹಾಯ ನಾಳಿನ ಪೀಳಿಗೆಯ ಭವಿಷ್ಯವನ್ನು ರೂಪಿಸಲಿದೆ. ಎಂಬ ಆಶಯದೊಂದಿಗೆ ದಾನಿಗಳು ಉದಾರವಾಗಿ ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ಅಧ್ಯಕ್ಷ ಆಯನೂರು ಮಂಜುನಾಥ್ ಹಾಗೂ ಕಟ್ಟಡ ಸಮಿತಿ ಅಧ್ಯಕ್ಷ ಎಸ್. ರುದ್ರೇಗೌಡ ಅವರು , ಗೌರವ ಕಾರ್ಯದರ್ಶಿ ಪಿ. ರುದ್ರೇಶ್, ಅವರು ನೇತೃತ್ವದಲ್ಲಿ ಭವ್ಯ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗಿದ್ದು, ನಾಳೆ ಉದ್ಘಾಟನೆ ಹಾಗೂ ಲೋಕಾರ್ಪಣೆಗೆ ಸಕಲ ಸಿದ್ದತೆಗೆ ಈಗಾಗಲೆ ಪೂರ್ಣಗೊಂಡಿದೆ.


