ಶಿವಮೊಗ್ಗ :- ಬೇಲ್ ಮೇಲೆ ಇರುವ ಭ್ರಷ್ಟಾಚಾರಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಅತ್ಯಂತ ಖಂಡನೀಯ. ಅವರನ್ನು ಸಂಪುಟದಿಂದ ಕೂಡಲೇ ಕೈಬಿಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸಚಿವ ನಾಗೇಂದ್ರ ಪದಚ್ಯುತಿಗೆ ಆಗ್ರಹಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಅನಿರ್ಧಿಷ್ಟವಾಧಿ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಎಸಗಿದ್ದ ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಆದರೆ, ಈಗ ಮತ್ತೆ ಸಂಪುಟಕ್ಕೆ ಸೇರ್‍ಪಡೆಗೊಳಿಸಿರುವುದು ಭ್ರಷ್ಟ ಕಾಂಗ್ರೆಸ್ ನ ಮುಖವಾಡ ಕಳಚಿ ಬಿದ್ದಿದೆ. ಇದು ಭ್ರಷ್ಟ ದರೋಡೆಕೋರ ಸರ್ಕಾರ. ಎಸ್‌ಸಿ, ಎಸ್‌ಟಿ ನಿಗಮದ ರೈತರ ಗಂಗಾ ಕಲ್ಯಾಣ ಯೋಜನೆಯ ಹಣ ನುಂಗಿದ್ದಾರೆ. ೧೮೭ ಕೋಟಿ ರೂ.ಗಳನ್ನು ಪೆಟ್ರೋಲ್ ಬಂಕ್ ಸೇರಿದಂತೆ ಇನ್ನಿತರ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿ ಅಲ್ಲಿಂದ ಬಂಗಾರದ ಬಿಸ್ಕೆಟ್ ಹಾಗೂ ನಗದು ರೂಪದಲ್ಲಿ ಮತ್ತು ಹವಾಲಾ ರೂಪದಲ್ಲಿ ೨೦೨೪ರ ಪಾರ್ಲಿಮೆಂಟ್ ಚುನಾವಣೆಗೆ ಹಾಗೂ ಹೈಕಮಾಂಡ್‌ಗೆ ನೀಡಲು ಬಳಸಿಕೊಂಡಿದೆ ಎಂದು ಇಡಿ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ ಎಂದರು.
ಈ ಕಾಂಗ್ರೆಸ್‌ಗೆ ಯಾವ ಭಾಷೆಯಲ್ಲಿ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಮತದಾರರಿಗೆ ಸುಳ್ಳು ಭರವಸೆ ಹಾಗೂ ಆಮಿಷವೊಡ್ಡಿ ೧೪೦ ಸೀಟ್ ಬಂದಿದೆ. ನಮ್ಮ ಸರ್ಕಾರ ಇರುವಾಗ ಮಾಡಿದ ಯೋಜನೆಗಳನ್ನು ಅಲ್ಪಸ್ವಲ್ಪ ಮುಗಿಸಿದ್ದು ಬಿಟ್ಟರೆ ಒಂದೇ ಒಂದು ಹೊಸ ಯೋಜನೆಗೆ ಗುದ್ದಲಿ ಪೂಜೆ ಮಾಡಿಲ್ಲ. ಗ್ಯಾರಂಟಿ ಹೆಸರಲ್ಲಿ ಹಿಂದುಳಿದ ವರ್ಗದ ಮತ್ತು ಪರಿಶಿಷ್ಟ ಜತಿ, ಪಂಗಡದ ಅನುದಾನವನ್ನು ಲೂಟಿ ಹೊಡೆದಿದ್ದೇ ಇವರ ಸಾಧನೆ ಎಂದು ಟೀಕಿಸಿದರು.
ಶಕ್ತಿ ಯೋಜನೆಯಲ್ಲೂ ಮೋಸ, ಬಸ್ ಗಳನ್ನು ಹೆಚ್ಚಿಗೆ ಮಾಡಿಲ್ಲ, ಒಂದೆಡೆ ಟಿಕೆಟ್ ದರ ಏರಿಸಿದರು. ಗ್ರಾಮಾಂತರ ಮಕ್ಕಳಿಗೆ ಶಾಲಾ, ಕಾಲೇಜುಗಳಿಗೆ ಹೋಗಲು ಬಸ್ ಇಲ್ಲದಂತೆ ಮಾಡಿದರು. ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ೫ ಸಾವಿರ ಕೋಟಿ ರೂ. ನಾಪತ್ತೆ ಮಾಡಿದರು. ೨೦೦ ಯೂನಿಟ್ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ಎಂದು ಹೇಳಿ ವಿದ್ಯುತ್ ದರ ಏರಿಸಿ ಈಗ ೫೦ ಯೂನಿಟ್‌ಗಿಂತ ಜಸ್ತಿ ಬಳಸಿದರೆ ಹೆಚ್ಚುವರಿ ಶುಲ್ಕ ಹಾಕುತ್ತಿದ್ದಾರೆ. ಲೆಕ್ಕಕ್ಕೆ ಮಾತ್ರ ಚೆಕ್ಕುಲಿ ಕಾಣುತ್ತಿದ್ದು, ಒಳಗಿನ ಸುರುಳಿಯನ್ನು ತಿಂದು ಮುಗಿಸಿದ್ದಾರೆ. ಇದು ಕಾಂಗ್ರೆಸ್ ಆಡಳಿತವೈಖರಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಗುರುಮೂರ್ತಿ, ಹನುಮಂತಪ್ಪ, ಮಾಲತೇಶ್, ಹರೀಶ್, ಗಿರೀಶ್, ರಾಮಾನಾಯ್ಕ್, ಮೂರ್ತಿ, ಸುರೇಖಾ ಮುರಳೀಧರ್, ಶಾಂತಾ ಸುರೇಂದ್ರ, ವೀರಭದ್ರಪ್ಪ ಪೂಜರ್, ಸುಮಾ ಭೂಪಾಳಂ, ಮಂಗಳಾ ನಾಗೇಂದ್ರ, ಚಂದ್ರಶೇಖರ್ ಎಸ್., ಸೇರಿದಂತೆ ಪ್ರಮುಖರಿದ್ದರು.


