ಶಿವಮೊಗ್ಗ :- ಯಾವುದೇ ಸ್ಪರ್ಧಾತ್ಮಕ ಯುಗದಲ್ಲಿ ಹೋರಾಟ ನಡೆಸಿ ಯಶಸ್ಸು ಸಾಧಿಸಲು ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದ್ದು, ಗುಣಮಟ್ಟದ ಶಿಕ್ಷಣ ಪ್ರತಿಯೊಬ್ಬರಿಗೂ ತಲುಪಬೇಕು ಎಂಬ ಬದ್ಧತೆಯನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ (ಎನ್‌ಇಎಸ್) ಸ್ಥಾಪನಾ ದಿನದಿಂದಲೂ ಉಳಿಸಿಕೊಂಡು ಬಂದಿದೆ ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಶಾಂತನಗೌಡ ಹೇಳಿದರು.
ಹೊನ್ನಾಳಿ ತಾಲೂಕಿನ ಚೀಲೂರಿ ನಲ್ಲಿರುವ ಎನ್‌ಇಎಸ್ ವಿದ್ಯಾಸಂಸ್ಥೆ ಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಹಾಗೂ ರೋಟರಿ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ್ದ, ನ್ಯಾಷನಲ್ ಇಂಗ್ಲೀಷ್ ಶಾಲೆಯ ನೂತನ ಕಟ್ಟಡ ಹಾಗೂ ರೋಟರಿ ಜಗತಿಕ ಅನುದಾನದಲ್ಲಿ ನವೀಕರಣಗೊಂಡ ರಾಷ್ಟ್ರೀಯ ಪ್ರೌಢಶಾಲೆಯ ಕಟ್ಟಡ ಲೋಕಾರ್ಪಣೆ ಹಾಗೂ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ರಷ್ಟು ಫಲಿತಾಂಶ ಸಾಧಿಸಿದ ಶಾಲೆಗಳ ಅಧ್ಯಾಪಕರಿಗೆ ಅಭಿನಂದನಾ ಸಮಾ ರಂಭದಲ್ಲಿ ಅವರು ಮಾತನಾಡಿದರು.
ಎನ್‌ಇಎಸ್ ಸಂಸ್ಥೆಯ ಸ್ಥಾಪನೆ ಹಾಗೂ ಬೆಳವಣಿಗೆಯಲ್ಲಿ ಪಾಲ್ಗೊಂಡ ಸಮಾಜ ಸೇವಕರ ಸೇವೆ ಎಂದೆಂದಿಗೂ ಸ್ಮರಣೀಯ. ಶಿಕ್ಷಣದ ಮೂಲಕ ಸಮಾಜದ ಸಬಲೀಕರಣಕ್ಕೆ ಸಂಸ್ಥೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ವಿದ್ಯಾಭ್ಯಾಸ ಒದಗಿಸುವ ಉದ್ದೇಶದಿಂದ ಸರ್ಕಾರ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಿದೆ. ಇದರ ನಡುವೆಯೂ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಪ್ರತಿಭಾವಂತರಿಗೆ ಶಿಕ್ಷಣ ಮತ್ತು ಉನ್ನತೀಕರಣದ ಅವಕಾಶ ಗಳನ್ನು ಕಲ್ಪಿಸಲು ಎನ್‌ಇಎಸ್ ನಂತಹ ಸಂಸ್ಥೆಗಳ ಸಹಭಾಗಿತ್ವ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾಗಿದೆ ಎಂದರು.
1.06 ಕೋಟಿ ವೆಚ್ಚದಲ್ಲಿ ಕನ್ನಡ ಮಾಧ್ಯಮ ಶಾಲೆ ನವೀಕರಣ :

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್‍ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ರೋಟರಿಯ ಜಗತಿಕ ಅನುದಾನದೊಂದಿಗೆ ಸಂಸ್ಥೆಯ ಅನುದಾನವನ್ನು ಸೇರಿಸಿ ರಾಷ್ಟ್ರೀಯ ಕನ್ನಡ ಮಾಧ್ಯಮ ಶಾಲೆಯನ್ನು ಒಟ್ಟು ೧.೦೬ ಕೋಟಿ ವೆಚ್ಚದಲ್ಲಿ ನವೀಕರಿಸ ಲಾಗಿದೆ. ನೂತನ ಶೌಚಾಲಯಗಳು, ಕಂಪ್ಯೂಟರ್ ಪ್ರಯೋಗಾಲಯ, ಸ್ಮಾರ್ಟ್ ತರಗತಿಗಳು ಹಾಗೂ ಶಿಕ್ಷಕರ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಈ ಅನುದಾನ ಒಳಗೊಂಡಿದೆ ಎಂದರು.
ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಎನ್‌ಇಎಸ್ ಸಹ ಕಾರ್‍ಯಾದರ್ಶಿ ಡಾ. ಪಿ. ನಾರಾಯಣ್, ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೆ.ಪಾಲಾಕ್ಷ, ರೋಟರಿ ಶಿವಮೊಗ್ಗ ಅಧ್ಯಕ್ಷ ಗೋಪಿನಾಥ್, ಮಾಜಿ ಅಧ್ಯಕ್ಷ ಆನಂದ್, ರಾಷ್ಟ್ರೀಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಹಾಗೂ ರಾಷ್ಟ್ರೀಯ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯರಾದ ಆದರ್ಶ್ ಮಾತನಾಡಿದರು.
ಎನ್‌ಇಎಸ್ ನಿರ್ದೇಶಕ ಪಿ. ಮೈಲಾರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಯೋಜಿತ ರೋಟರಿ ಗವರ್ನರ್ ವಸಂತ ಹೋಬಳಿದಾರ್, ಎನ್‌ಇಎಸ್ ಖಜಂಚಿ ಡಿ.ಜಿ. ರಮೇಶ್ ಹಾಗೂ ಇನ್ನಿತರರಿದ್ದರು. ಎನ್‌ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ. ನೃಪತುಂಗ ಕಾರ್ಯಕ್ರಮ ನಿರೂಪಿಸಿದರು.


