ಶಿವಮೊಗ್ಗ :- ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆ. 20ರಿಂದ 22ರವರೆಗೆ ಹಮ್ಮಿಕೊಂಡಿರುವ ಪರಿಸರ ಸತ್ಯಾಗ್ರಹದಲ್ಲಿ ರಾಷ್ಟ್ರಭಕ್ತರ ಬಳಗವು ಕೂಡ ಪಾಲ್ಗೊಳ್ಳುವುದೆಂದು ರಾಷ್ಟ್ರಭಕ್ತ ಬಳಗ ಮುಖ್ಯಸ್ಥ ಶ್ರೀಕಾಂತ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಪರಿಸರ ಆಸಕ್ತರು ಸೇರಿಕೊಂಡು ಈ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ. ನಾಗೇಶ್ ಹೆಗ್ಡೆ, ಸಂತೋಷ್ ಹೆಗ್ಡೆ, ಸೇರಿದಂತೆ ಹಲವು ಪರಿಸರ ಪ್ರೇಮಿಗಳು ರಾಜ್ಯದ ಪರಿಸರ ಮತ್ತು ಕೃಷಿಕರ ಉಳಿವಿಗೋಸ್ಕರ ಹಮ್ಮಿಕೊಂಡಿರುವ ಈ ಸತ್ಯಾಗ್ರಹಕ್ಕೆ ರಾಷ್ಟ್ರಭಕ್ತ ಬಳಗ ಬೆಂಬಲ ನೀಡುವು ದಲ್ಲದೆ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 250 ಕ್ಕೂ ಹೆಚ್ಚು ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರು ಇದರಲ್ಲಿ ಭಾಗವಹಿಸುತ್ತಾರೆ ಎಂದರು.
ರಾಜ್ಯದಲ್ಲಿ ನಿರಂತರವಾಗಿ ಸರ್ಕಾರಿ ಕೃಪಾಪೋಷಿತ ಅರಣ್ಯ ಹಾಗೂ ಪರಿಸರ ನಾಶದ ಕಾರ್ಯ ನಡೆಯುತ್ತಿದೆ. ಜೀವ ನದಿಗಳ ಉಗಮ ಸ್ಥಾನಗಳು ಕಣ್ಮರೆಯಾಗುತ್ತಿವೆ. ಒಂದು ಕಡೆ ಅರಣ್ಯ ನಾಶ ಮತ್ತೊಂದು ಕಡೆ ಬೃಹತ್ ವಿದ್ಯುತ್ ಯೋಜನೆಗಳಿಂದ ನದಿ ಮೂಲಗಳೇ ನಾಶವಾಗುತ್ತಿವೆ. ಇದರಿಂದ ಜನರ ಬದುಕೆ ದುಸ್ತರ ವಾಗುವ ಸ್ಥಿತಿಯಲ್ಲಿದೆ. ಕೃಷಿ ಕ್ಷೇತ್ರ ಕೂಡ ನಷ್ಟದ ಹಾದಿ ಹಿಡಿದಿದೆ. ಶರಾವತಿ, ವರಾಹಿ, ಬೇಸೂರು ಅಣು ವಿದ್ಯುತ್ ಯೋಜನೆ, ಆಗುಂಬೆ ಸುರಂಗ ಮಾರ್ಗ ಸೇರಿದಂತೆ ಇಡೀ ಮಲೆನಾಡು ಹೊಸ ಯೋಜನೆಗಳಿಂದ ನಾಶವಾಗಿ ಮಲೆನಾಡೇ ಸುಡು ಗಾಡಾಗಿ ಪರಿವರ್ತನೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಎಲ್ಲಾ ಅಂಶಗಳನ್ನ ಇಟ್ಟುಕೊಂಡು ಪ್ರಸ್ತುತ ಕಸ್ತೂರಿ ರಂಗನ್ ವರದಿಯ ಚರ್ಚೆ ಕೂಡ ನಡೆಯುತ್ತಿರುವ ಹಿನ್ನೆಯಲ್ಲಿ ಮಲೆನಾಡನ್ನು ಜೊತೆಗೆ ಕೃಷಿಕರನನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರಭಕ್ತ ಬಳಗ ಈ ಪರಿಸರ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದೆ ಎಂದರು.
ರಾಷ್ಟ್ರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರು ಮಾತನಾಡಿ, ಈಗಾಗಲೇ 6 ರಾಜ್ಯಗಳ ತಜ್ಞರ ಸಮಿತಿ ರಚನೆಯಾಗಿದೆ. ಕಾನೂನು ವಿಭಾಗವೂ ಕೂಡ ಕೆಲಸ ಮಾಡುತ್ತಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸೆ. 27 ರಂದು ಬಂಗಾರಮಕ್ಕಿಯಲ್ಲಿ ಚಾರ್ತುಮಾಸ ಸಮಾರೋಪ ಸಮಾರಂಭ ನಡೆಯಲಿದೆ. ಇಲ್ಲಿ ಈ ವರದಿ ಕುರಿತು ಪರಿಸರ ತಜ್ಞರು ಚರ್ಚೆ ಮಾಡಲಿದ್ದು, ಬಂಗಾರಮಕ್ಕಿ ಶ್ರೀಗಳು ಇದರ ನೇತೃತ್ವ ವಹಿಸಲಿದ್ದಾರೆ. ಹಲವು ಮಠಾಧೀಶರು ಕೂಡ ಇದರಲ್ಲಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರಭಕ್ತ ಬಳಗವು ಕೂಡ ಈ ಚಾರ್ತುಮಾಸ ಸಮಾರೋಪದಲ್ಲಿ ಭಾಗವಹಿಸಿ ಪರಿಸರ ಉಳಿವಿನ ಬಗ್ಗೆ ಚರ್ಚಿಸಲಾಗುವುದು ಎಂದರು.
ಪ್ರಮುಖರಾದ ಶೇಖರ್ ಗೌಳೇರ್ ಸುಬ್ರಮಣ್ಯ, ರಮೇಶ್, ಕುಮಾರ್, ಶಿವು, ಲೋಕನಾಥ್, ಅರುಣ್, ಅಶೋಕ್ ಕುಮಾರ್, ಮುಂತಾದವರಿದ್ದರು.


