ಶಿವಮೊಗ್ಗ : ಗೋವರ್ಧನ ಟ್ರಸ್ಟ್‌ನ ಒಂದು ವರ್ಷದ ಗೋಸೇವಾ ಪಯಣದ ಅಂಗವಾಗಿ ಅ. 7ರಂದು ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನದಲ್ಲಿ ‘ಗೋ ಸಂಜೀವಿನಿ ಧಾಮ’ ಅಶಕ್ತ ಗೋವುಗಳ ಆರೈಕೆ ಕೇಂದ್ರಕ್ಕೆ ಶಂಕುಸ್ಥಾಪನೆ ಹಾಗೂ ಅ. 8ರಂದು ವಿನೋಬನಗರದ ಶುಭಮಂಗಳ ಸಮುದಾಯ ಭವನದಲ್ಲಿ ‘ಗೋ ಸೇವಾ ಸಂಭ್ರಮ 2026’ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕೆ.ಈ. ಕಾಂತೇಶ್ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಳೆದ ಒಂದು ವರ್ಷದಲ್ಲಿ ಸಾವಿರಾರು ಮಂದಿ ಪ್ರತಿ ತಿಂಗಳು 100ರೂ. ನಂತೆ ಕೊಡುಗೆ ನೀಡುವ ಮೂಲಕ ಗೋಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಗೋವುಗಳ ರಕ್ಷಣೆ, ಪೋಷಣೆ, ಗೋಶಾಲೆಗಳಿಗೆ ನೆರವು, ಮೇವು ಪೂರೈಕೆ, ಸಾವಯವ ಕೃಷಿ ಹಾಗೂ ಗೋ ಉತ್ಪನ್ನಗಳ ಪ್ರಚಾರ ಸೇರಿದಂತೆ ಹಲವು ಕಾರ್ಯಗಳನ್ನು ಟ್ರಸ್ಟ್ ಕೈಗೊಂಡಿದೆ ಎಂದರು.
ಗಾಯಗೊಂಡ ಹಾಗೂ ಅನಾರೋಗ್ಯಕ್ಕೊಳಗಾದ ಗೋವು ಗಳಿಗೆ ಗೋ ಅಂಬುಲೆನ್ಸ್ ಮೂಲಕ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ನೀಡಲಾಗಿದೆ. ರಕ್ಷಿಸಲಾದ ಗೋವುಗಳನ್ನು ಮಾಲೀಕರು ವಾಪಸ್ ಪಡೆಯದ ಸಂದರ್ಭಗಳಲ್ಲಿ ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ‘ಗೋ ಸಂಜೀವಿನಿ ಧಾಮ’ ಆರಂಭಿಸಲಾಗು ತ್ತಿದೆ ಎಂದು ಹೇಳಿದರು. ಅ. 7ರಂದು ಮಧ್ಯಾಹ್ನ 1ರಿಂದ 2ರವರೆಗೆ ನಡೆಯುವ ಶಂಕುಸ್ಥಾಪನೆ ಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ ನೆರವೇರಿಸುವರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು ಎಂದರು.
ಅ. 8ರಂದು ಬೆಳಿಗ್ಗೆ ೧೦.೩೦ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯುವ ಗೋ ಸೇವಾ ಸಂಭ್ರಮದಲ್ಲಿ ಉಪನ್ಯಾಸ, ಸಂವಾದ, ವಿವಿಧ ಗೋ ತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಇರಲಿದೆ. ‘ಅಶ್ವಶಕ್ತಿ’ ಹಾಗೂ ವಿಶ್ವಬಂಧು ಗೋಶಾಲೆಯಲ್ಲಿ ತಯಾರಿಸಿದ ಸಾವಯವ ಗೊಬ್ಬರವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.
ಅಶ್ವಶಕ್ತಿ ಗೊಬ್ಬರವನ್ನು ಕುದುರೆಗಳ ಸಗಣಿಯಿಂದ ವೈಜನಿಕವಾಗಿ ತಯಾರಿಸಲಾಗುತ್ತಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಯೋಜಿಸಲಾಗಿದೆ. ವಿಶ್ವಬಂಧು ಗೋಶಾಲೆಯಲ್ಲಿ ಗೋವುಗಳ ಸಗಣಿ ಸೇರಿದಂತೆ ವಿವಿಧ ಉತ್ಪನ್ನಗಳಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ ಎಂದರು. ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರೈತರೊಂದಿಗೆ ಸಂವಾದ ನಡೆಯಲಿದೆ. ಸಾವಯವ ಕೃಷಿ, ಮಣ್ಣಿನ ಫಲವತ್ತತೆ, ಗೊಬ್ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿ ಗಳಾದ ಹೆಚ್.ಬಿ. ರಮೇಶ್ ಬಾಬು, ನಾಗೇಶ್ ಎಂ., ಖಜಂಚಿ ಎಸ್.ಕೆ. ಶೇಷಾಚಲ, ಸೀತಾರಾಂ, ನಾಗರಾಜ್, ಜಯಸ್ವಾಮಿ, ಉದಯ್ ಕುಮಾರ್, ಶ್ರೀಕಾಂತ್, ಶುಭ ರಾಘವೇಂದ್ರ, ಉಷಾ ಅರುಣ್ ಇನ್ನಿತರರಿದ್ದರು.


