ಇಂದು ಸಾಗರದ ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಾಗರ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದಲ್ಲದೆ ಗ್ರಾಮೀಣ ಜನರ ಜ್ವಲಂತ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಒದಗಿಸುವುದು ಕೂಡ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದಾಗಿ ಸ್ಥಳೀಯ ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರ ದೊರೆತು ನೆಮ್ಮದಿಯ ಬದುಕು ಸಾಧ್ಯವಾಗಲಿದೆ ಎಂದವರು ನುಡಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪ್ರಜಾ ಸೇವಾ ಆಂದೋಲನ ಸಭೆಗಳು ನಡೆಯಲಿವೆ. ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಇದೇ ರೀತಿಯ ಜನಸ್ಪಂದನ ಎಂಬ ಅಪರೂಪದ ಜನಪ್ರಿಯ ಕಾರ್ಯಕ್ರಮ ವನ್ನು ರೂಪಿಸಿ ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯ ಜನರಿಗೆ ಸೇವೆ ಮತ್ತು ಸೌಲಭ್ಯಗಳನ್ನು ಒದಗಿಸಲಾಗಿತ್ತು. ಪ್ರಸ್ತುತ ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಜಾಸೇವಾ ಎಂಬ ಇಲಾಖೆಯನ್ನು ಪ್ರತ್ಯೇಕವಾಗಿ ಸೃಷ್ಟಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ವೀಕರಿಸಲಾಗುವ ಎಲ್ಲಾ ಅರ್ಜಿಗಳನ್ನು ನಿಗದಿಪಡಿಸಿದ ಕಾಲಮಿತಿಯಲ್ಲಿ ವಿಲೇವಾರಿ ಗೊಳಿಸಲಾಗುವುದು ಎಂದರು
ವಿಶೇಷವಾಗಿ ಈ ಕಾರ್ಯಕ್ರಮದ ವ್ಯವಸ್ಥಿತ ಅನುಷ್ಠಾನ ದಿಂದಾಗಿ ಪ್ರಾದೇಶಿಕವಾಗಿರುವ ಜ್ವಲಂತ ಸಮಸ್ಯೆಗಳು ಸರ್ಕಾರದ ಗಮನಕ್ಕೆ ಬರುವುದಲ್ಲದೆ ಅವುಗಳಿಗೆ ಶಾಶ್ವತವಾಗಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಯಾವುದೇ ದೇಶದ ಉಜ್ವಲ ಭವಿಷ್ಯ ಮತ್ತು ಪ್ರಗತಿ ಆ ದೇಶದ ಮಕ್ಕಳಿಂದ ಸಾಧ್ಯವಾಗಲಿದೆ. ಅವರ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಜವಾಬ್ದಾರಿ ಹೊಂದಿರುವ ನಾನು ಶಿಕ್ಷಣ ಸಚಿವನಾಗಿ ಶಕ್ತಿ ಮೀರಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.
ರಾಜ್ಯದಾದ್ಯಂತ 1250 ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು 2026ರ ಡಿಸೆಂಬರ್ ಮಾಸಾಂತ್ಯದೊಳಗಾಗಿ ಉದ್ಘಾಟಿಸುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಈ ಯೋಜನೆಗಾಗಿ ಸುಮಾರು 4300 ಕೋಟಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಮಾತನಾಡಿ, ಸರ್ಕಾರದ ಸೇವೆ ಕಚೇರಿಗಳಿಗೆ ಮಾತ್ರ ಸೀಮಿತವಾಗಿರದೆ ಸರ್ಕಾರದ ಯೋಜನೆಗಳು ಜನರಿಗೆ ತಲುಪಿ, ಜನರ ಬದುಕಿನಲ್ಲಿ ಬದಲಾವಣೆ ತರುವ ವ್ಯವಸ್ಥೆ ಆಗಬೇಕು ಎಂದರು.
ಪ್ರಜಾಸೇವಾ ಆಂದೋಲನ ಸಭೆಗಳ ಮೂಲಕ ಸರ್ಕಾರ ಜನರ ಸಮಸ್ಯೆಗಳಿಗೆ ಕಿವಿಯಾಗಲಿದೆ ಎಂದ ಅವರು ರಾಜ್ಯದ ವಸತಿ ರಹಿತರಿಗೆ ನಿವೇಶನ ನೀಡಿ ನೆಮ್ಮದಿಯ ಸೂರು ನಿರ್ಮಿಸಿಕೊಳ್ಳಲು ಪ್ರತಿ ಜಿಲ್ಲೆಗೆ 50ಸಾವಿರ ನಿವೇಶನಗಳನ್ನು ಸೃಜಿಸುವಂತೆ ಸೂಚನೆ ನೀಡಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಸಾಗರ ತಾಲೂಕು ಒಂದಕ್ಕೆ ಸುಮಾರು ಹತ್ತು ಸಾವಿರ ನಿವೇಶನಗಳ ಬೇಡಿಕೆ ಬರುವ ಸಾಧ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯವಾಗಿ ಸಚಿವರು ಜನರ ಅಹವಾಲನ್ನು ಸ್ವೀಕರಿಸಿದರು. ವನ್ಯಜೀವಿ ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ಮತ್ತು ಸ್ಮರಣಿಕೆಯನ್ನು ನೀಡಲಾಯಿತು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, ಅರಣ್ಯಾಧಿಕಾರಿಗಳಾದ ಪ್ರಸನ್ನ ಪುಟ್ಟಗಾಯ ಸುದ್ದಿ ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಬಿ ಆರ್ ಜಯಂತ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳಿದ್ದರು.


