ಸೊರಬ :- ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಚಂದ್ರಗುತ್ತಿಯ ರೇಣುಕಾಂಬಾ ದೇವಸ್ಥಾನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಾಲ್ಕು ತಿಂಗಳ ನಂತರ ನಿನ್ನೆ ಗುರುವಾರ ನಡೆದಿದ್ದು, 35,07,390 ಲಕ್ಷ ರೂ. (ಚಿಲ್ಲರೆ ಹೊರತು ಪಡಿಸಿ) ಸಂಗ್ರಹವಾಗಿದೆ.
ಕಳೆದ ಜೂನ್‌ನಲ್ಲಿ ನಡೆದಿದ್ದ ಹುಂಡಿ ಎಣಿಕೆ ಸಂದರ್ಭದಲ್ಲಿ 33.90 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿತ್ತು. ಶ್ರಾವಣ ಮಾಸ, ಹಬ್ಬದ ದಿನಗಳು ಸೇರಿದಂತೆ ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಈ ಬಾರಿ ಕಾಣಿಕೆ ಪ್ರಮಾಣದಲ್ಲಿ ಸರಿಸುಮಾರು 1.20 ಲಕ್ಷ ರೂ. ಏರಿಕೆಯಾಗಿದೆ. ಹಣ ಎಣಿಕೆ ಕಾರ್ಯ ಅತ್ಯಂತ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕೊಠಡಿ ಸುತ್ತಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಎಂದು ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆಯ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮೀ ಪ್ರಕಾಶ್ ತಿಳಿಸಿದ್ದಾರೆ.
ಮುಜರಾಯಿ ದೇವಾಲಯಗಳ ಆದಾಯ ಸೋರಿಕೆ ತಡೆಯಲು ಮತ್ತು ಪಾರದರ್ಶಕತೆ ತರಲು ಡಿಜಿಟಲ್ ಲೆಕ್ಕಪತ್ರ ವ್ಯವಸ್ಥೆ ಜರಿಗೆ ತರುವಂತೆ ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಜಿಲ್ಲೆ ಸೇರಿದಂತೆ ದೇವಾ ಲಯಗಳ ಸಾರ್ವಜನಿಕ ಆಸ್ತಿ ಮತ್ತು ಭಕ್ತರ ಕಾಣಿಕೆ ರಕ್ಷಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು.
ಚಂದ್ರಗುತ್ತಿ ಹೋಬಳಿಯ ಉಪ ತಹಶೀಲ್ದಾರ್, ಸೊರಬ ತಾಲೂಕು ಕಛೇರಿಯ ಮುಜರಾಯಿ ಶಾಖೆಯ ಶಿರಸ್ತೇದಾರ್, ಜಿಲ್ಲಾಧಿಕಾರಿ ಕಛೇರಿಯ ವಿಷಯ ನಿರ್ವಾಹಕ ಮಧು, ಎಸ್‌ಡಿಎ ವೀಣಾ ರಾವ್, ಮಧು, ಕಾರ್ತಿಕ್, ಪ್ರದೀಪ್, ಶೃತಿ, ಪ್ರಮೀಳಾ, ಕಂದಾಯ ಇಲಾಖೆ, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಬ್ಯಾಂಕ್ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಎಣಿಕೆ ಪ್ರಕ್ರಿಯೆಯಲ್ಲಿ ಮುಜ ರಾಯಿ, ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿ ಗಳು, ಗ್ರಾಮ ಸಹಾಯಕರು ಮತ್ತು ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿ ದ್ದರು. ಸ್ಥಳೀಯ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು.
ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹುಂಡಿ ಏಣಿಕೆ : ಶಿಕಾರಿಪುರ ತಾಲೂಕಿನ ತೊಗರ್ಸಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಹುಂಡಿ ಎಣಿಕೆ 5,48,328 ರೂ. ಸಂಗ್ರಹವಾಗಿದೆ. ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮೀ ಪ್ರಕಾಶ್, ಹೊಸೂರು ಹೋಬಳಿಯ ಉಪ ತಹಶೀಲ್ದಾರ್ ಕಿರಣ್ ಕುಮಾರ್, ತಾಳಗುಂದ ಹೋಬಳಿ ರಾಜಸ್ವ ನಿರೀಕ್ಷಕಿ ಅರ್ಚನಾ ಜಿ.ಬಿ., ಗ್ರಾಮ ಆಡಳಿತಾಧಿಕಾರಿ ಮೋಹನ್ ಕುಮಾರ್, ಬಸಮ್ಮ, ಎಂ. ಶ್ವೇತಾ, ದರ್ಶನ್ ವಿ.ಬಿ., ಪ್ರವೀಣ್ ಕುಮಾರ್ ಹೆಚ್.ಆರ್., ಫ್ರಾನ್ಸಿಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.


