<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಕುತೂಹಲವೇ ವಿಜ್ಞಾನದ ಜೀವಾಳ : ಪ್ರೊ. ನಾಗರಾಜ್

Banner Ad
ಕುತೂಹಲವೇ ವಿಜ್ಞಾನದ ಜೀವಾಳ : ಪ್ರೊ. ನಾಗರಾಜ್

ಶಿವಮೊಗ್ಗ: ವಿಜ್ಞಾನವೆಂಬುದು ಕೇವಲ ಪಠ್ಯಪುಸ್ತಕಗಳಲ್ಲಿನ ಸಿದ್ಧಾಂತಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನವನ್ನು ಅರ್ಥೈಸಿಕೊಳ್ಳುವ ವಿಧಾನವಾಗಿದ್ದು, ಕುತೂಹಲ ಅದರ ಜೀವಾಳವಾಗಿದೆ ಎಂದು ಖ್ಯಾತ ಸೂಕ್ಷ್ಮಜೀವವಿಜ್ಞಾನಿ ಹಾಗೂ ಜವಾಹರಲಾಲ್ ನೆಹರು ವೈಜ್ಞಾನಿಕ ಸಂಶೋಧನಾ ಕೇಂದ್ರದ ಮಾಜಿ ಅಧ್ಯಕ್ಷ ಪ್ರೊ. ವಿ. ನಾಗರಾಜ ಹೇಳಿದರು.
ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ಅನ್ವಯಿಕ ವಿಜ್ಞಾನ ಕಾಲೇಜಿನ ಸೂಕ್ಷ್ಮಜೀವವಿಜ್ಞಾನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ವಿಜ್ಞಾನವೇ ಜೀವನ ವಿಧಾನ ಮತ್ತು ಆಧುನಿಕ ಜೀವಶಾಸ್ತ್ರ‌ , ಜೈವಿಕ ತಂತ್ರಜ್ಞಾನದ ಅಡಿಪಾಯವಾಗಿ ಸೂಕ್ಷ್ಮಜೀವವಿಜ್ಞಾನ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನದಲ್ಲಿ ಕಲಿಕೆಗೆ ಅಂತ್ಯವಿಲ್ಲ. ಹೊಸ ಪ್ರಶ್ನೆಗಳನ್ನು ಕೇಳುವ ಕುತೂಹಲ, ಪ್ರಯೋಗಗಳನ್ನು ರೂಪಿಸುವ ಸೃಜನಶೀಲತೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿರಂತರ ಪ್ರಯತ್ನ ಸಂಶೋಧನೆಯ ಮೂಲ ಶಕ್ತಿಗಳಾಗಿವೆ.
ಜೀವನದ ಉಗಮದಿಂದ ಹಿಡಿದು ಇಂದಿನ ಜೀವವೈವಿಧ್ಯದ ವಿಸ್ತಾರವರೆಗೆ ವಿಜ್ಞಾನ ಅನೇಕ ವಿಸ್ಮಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ರಾಸಾಯನಿಕ ವೈವಿಧ್ಯ, ರಾಸಾಯನಿಕ ವಿಕಾಸ ಮತ್ತು ಆದಿಮ ಜೀವದ ಉಗಮದ ಪ್ರಕ್ರಿಯೆಗಳು, ಜೀವಜಗತ್ತಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಲು ನೆರವಾಗಿವೆ. ಜೈವಿಕ ವಿಕಾಸದ ದೀರ್ಘ ಪಯಣದಿಂದ ಭೂಮಿಯಲ್ಲಿ ಅಸಂಖ್ಯಾತ ಜೀವ ರೂಪಗಳು ಅಸ್ತಿತ್ವಕ್ಕೆ ಬಂದಿವೆ.
ಪ್ರತಿಯೊಂದು ಜೀವಿಯೂ ತನ್ನದೇ ಆದ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು, ಅವುಗಳ ಅಧ್ಯಯನಕ್ಕೆ ಅಪಾರ ಅವಕಾಶಗಳಿವೆ. ಸಸ್ಯಗಳು, ಪ್ರಾಣಿಗಳು, ಬ್ಯಾಕ್ಟೀರಿಯಾಗಳು, ಜೀವಕೋಶಗಳು, ಅಂಗಾಂಶಗಳು, ಅಂಗಗಳು ಹಾಗೂ ಅಣುಗಳ ನಡುವಿನ ಪರಸ್ಪರ ಕ್ರಿಯೆಗಳು ವಿಜ್ಞಾನದ ಹೊಸ ಅನ್ವೇಷಣೆಗಳಿಗೆ ತೆರೆದ ಬಾಗಿಲುಗಳಾಗಿವೆ. ಮಾನವನ ವಿಕಾಸವೂ ಕುತೂಹಲಕಾರಿ ಸಂಶೋಧನಾ ಕ್ಷೇತ್ರವಾಗಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಮಾತನಾಡಿ, ವಿಜ್ಞಾನ ವಿದ್ಯಾರ್ಥಿಗಳಿಗೆ ಕುತೂಹಲದ ಜೊತೆಗೆ ಪ್ರಶ್ನೆಗಳನ್ನು ಕೇಳುವ ಆತ್ಮಸ್ಥೈರ್ಯವೂ ಅಗತ್ಯ. ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ವಿಜ್ಞಾನಿಗಳಿಗೆ ಅತ್ಯಂತ ಸಂತೋಷ ನೀಡುವ ಕ್ಷಣಗಳಲ್ಲಿ ಒಂದಾಗಿದೆ. ಪ್ರಶ್ನಿಸುವ ಮನೋಭಾವವೇ ಜ್ಞಾನದ ವಿಸ್ತರಣೆಗೆ ಹಾಗೂ ಹೊಸ ಸಂಶೋಧನೆಗಳಿಗೆ ಪ್ರೇರಣೆಯಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಕೆ.ಎಲ್. ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಸೂಕ್ಷ್ಮಜೀವವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಮುಕುಂದ, ಸಹಾಯಕ ಪ್ರಾಧ್ಯಾಪಕ ಡಾ. ಪ್ರಶಿತ್ ಕೆಕುಡ ಉಪಸ್ಥಿತರಿದ್ದರು. ಮಂದಾರ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಕೀರ್ತನ ನಿರೂಪಿಸಿದರು.
Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *