ಶಿವಮೊಗ್ಗ :- ರಂಗಭೂಮಿಯ ವಿವಿಧ ಪ್ರಕಾರಗಳನ್ನು ಜನರಿಗೆ ಪರಿಚಯಿಸುವುದು ಹಾಗೂ ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಶಿವಮೊಗ್ಗ ದಸರಾ ಅಂಗವಾಗಿ ಅ. 12ರಿಂದ 19ರವರೆಗೆ ರಂಗ ದಸರಾ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘದ ಅಧ್ಯಕ್ಷ ಕಾಂತೇಶ್ ಕದರಮಂಡಲಗಿ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ನಗರದ ವಿವಿಧೆಡೆ ನಾಟಕ ಪ್ರದರ್ಶನ, ಏಕಪಾತ್ರಾಭಿನಯ ಸ್ಪರ್ಧೆ, ಜಾನಪದ ಗೀತೆಗಳ ಗಾಯನ, ರಂಗಗೀತೆ ಗಾಯನ, ನೃತ್ಯರೂಪಕ, ಗ್ರಾಮರಂಗ, ರಂಗ ಸಂತೆ, ಕುಟುಂಬ ರಂಗ ಹಾಗೂ ಉಚಿತ ಪ್ರಸಾಧನ ಶಿಬಿರ ನಡೆಯಲಿವೆ ಎಂದರು. ಅ. 11ರ ಭಾನುವಾರ ಮಧ್ಯಾಹ್ನ ೨ಕ್ಕೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾ ಮಟ್ಟದ ಏಕಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ. 15 ವರ್ಷ ದೊಳಗಿನವರಿಗೆ ಡ್ರಾಮಾ ಜೂನಿಯರ್ ಹಾಗೂ 15 ವರ್ಷ ಮೇಲ್ಪಟ್ಟವರಿಗೆ ಡ್ರಾಮಾ ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆ ಇರುತ್ತದೆ.
ಅ. 12ರ ಬೆಳಿಗ್ಗೆ 10.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನದ ರಂಗ ದಸರಾವನ್ನು ಹರಿಗೆ ಗೋಪಾಲಸ್ವಾಮಿ ಉದ್ಘಾಟಿಸಲಿದ್ದಾರೆ ಎಂದರು. ಅಂದು ಕಾಲೇಜು ರಂಗೋತ್ಸವದ ಅಂಗವಾಗಿ ವಿವಿಧ ಕಾಲೇಜುಗಳ ವಿದ್ಯಾರ್ಥಿ ಗಳಿಂದ ನಾಟಕ ಪ್ರದರ್ಶನವಿದ್ದು, ಕೆ.ವಿ. ಸುಬ್ಬಣ್ಣ ಅನುವಾದದ ಭಗವದಜ್ಜುಕೀಯಂ ನಾಟಕವನ್ನು ಯೋಗೇಶ್ ಆರ್. ನಿರ್ದೇಶನದಲ್ಲಿ ಪ್ರಸ್ತುತಪಡಿಸಲಿದ್ದಾರೆ ಎಂದರು. ವಚನಗಳನ್ನು ಆಧರಿಸಿದ ಈಸಕ್ಕಿ ಆಸೆ ನಮಗೇಕೆ, ಡಾ. ಗಜಾನನ ಶರ್ಮ ರಚನೆಯ ಪುಸ್ತಕ ಪಾಂಡಿತ್ಯ ಹಾಗೂ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಯನ್ನು ಆಧರಿಸಿದ ಶೂರ್ಪನಖಿ ನಾಟಕಗಳೂ ಪ್ರದರ್ಶನಗೊಳ್ಳಲಿವೆ ಎಂದರು. ಕುವೆಂಪು ರಚನೆಯ ಬೆರಳ್‌ಗೆ ಕೊರಳ್ ನಾಟಕವನ್ನು ಕೂಡ್ಲಿ ಶ್ರೀಧರಾಚಾರ್ ನಿರ್ದೇಶನದಲ್ಲಿ ಶಿವಮೊಗ್ಗದ ಅರ್ಚಕರ ಸಂಘ ಪ್ರಸ್ತುತಪಡಿಸಲಿದೆ. ಮಧ್ಯಾಹ್ನ 3.45ರಿಂದ ತಾಯಿ ಮನೆ ಆಶ್ರಿತರು ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳು ಮರದ ನೆರಳು ನಾಟಕ ಪ್ರದರ್ಶಿಸಲಿದ್ದಾರೆ. ಸೋರುತಿಹುದು ಸಂಬಂಧ ನಾಟಕವನ್ನು ಶಿವಮೊಗ್ಗದ ವಕೀಲ ಮಿತ್ರರು ಪ್ರಸ್ತುತಪಡಿಸಲಿದ್ದಾರೆ ಎಂದರು. ಹೇಳಿ ನಿವ್ಯಾರ ಕಡೆ ನಾಟಕವನ್ನು ಡಾ. ಸಾಸ್ವೆಹಳ್ಳಿ ಸತೀಶ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಶಿವಮೊಗ್ಗ ನಗರದ ಸರ್ಕಾರಿ ಶಾಲಾ ಶಿಕ್ಷಕರ ವೃಂದ ಪ್ರದರ್ಶಿಸಲಿದೆ ಎಂದರು.
ರಂಗ ದಸರಾ ಸದಸ್ಯ ಕಾರ್ಯದರ್ಶಿ ಮಧು ನಾಯ್ಕ್ ಮಾತನಾಡಿ, ಈ ಬಾರಿಯ ರಂಗ ದಸರಾದಲ್ಲಿ 25 ನಾಟಕಗಳು ಸೇರಿದಂತೆ ಒಟ್ಟು 39 ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ. 400ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದು, ನಗರದ 12ಕ್ಕೂ ಹೆಚ್ಚು ವೇದಿಕೆಗಳಲ್ಲಿ ಕಾರ್ಯಕ್ರಮ ಗಳು ನಡೆಯಲಿವೆ ಎಂದರು.
ಅ. 14ರಂದು ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಉಷಾ ನಟೇಶ್ ಕಾಸರವಳ್ಳಿ ಅವರ ರಚನೆ, ಪರಿಕಲ್ಪನೆ ಮತ್ತು ನಿರ್ದೇಶನದ ರಾಮಾಯಣ ದಲ್ಲಿ ಕೈಕೇಯಿ ನಾಟಕವನ್ನು ರಂಗ ಸೌರಭ ತಂಡ ಪ್ರದರ್ಶಿಸಲಿದೆ. ಅ. 16ರಂದು ಸಂಜೆ 7ಕ್ಕೆ ಮೃತ್ಯು ನಾಟಕವನ್ನು ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಹೊಂಗಿರಣ ತಂಡ ಪ್ರಸ್ತುತಪಡಿಸಲಿದೆ. ಅದೇ ದಿನ ಸಂಜೆ 7ಕ್ಕೆ ಅಲ್ಲಮಪ್ರಭು ಮೈದಾನದಲ್ಲಿ 100ಕಲಾವಿದರಿಂದ ರಂಗಗೀತೆ ಗಾಯನ ಮತ್ತು ನೃತ್ಯರೂಪಕ ನಡೆಯಲಿದೆ. ಶಿವಮೊಗ್ಗ ಚಂದನ್ ನಿರ್ದೇಶನದಲ್ಲಿ ನಂದನಂ ಫೌಂಡೇಶನ್ ತಂಡ ಕಾರ್ಯಕ್ರಮ ನೀಡಲಿದೆ ಎಂದರು. ಆರ್. ಎಸ್. ಹಾಲಸ್ವಾಮಿ, ಚಂದನ್ ನೀನಾಸಂ, ಡಿ.ಎಂ ರಾಜಕುಮಾರ್, ಸುರೇಶ್ ಇದ್ದರು.


