
ಸೊರಬ :- ಸುರಭಿ ಪುರದ ಪುರದೈವ ಶ್ರೀರಂಗನಾಥಸ್ವಾಮಿ ದೇವಸ್ಥಾನವು ತಾಲ್ಲೂಕಿಗೆ ಕೀರ್ತಿ ಶಿಖಿರವಾಗಿದ್ದು, ದೇವರ ನೂತನ ರಥ ನಿರ್ಮಾಣಗೊಂಡಿರುವುದರಿಂದ ದಶಕಗಳ ಕನಸು ಈಡೇರಿದೆ. ಈ ಮಹತ್ವದ ಕಾರ್ಯದ ಯಶಸ್ಸಿಗೆ ಸಹಕಾರ ನೀಡಿದ ಪ್ರತಿಯೊಬ್ಬ ದಾನಿಗಳಿಗೆ ಕ್ಷೇತ್ರದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಪಟ್ಟಣದ ಆರಾಧ್ಯ ದೈವ ರಂಗನಾಥ ಸ್ವಾಮಿಯ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಸೊರಬ ಪೊಲೀಸ್ ಹಾಗೂ ಅಗ್ನಿಶಾಮಕ ಠಾಣೆಗೆ ವಾಹನಗಳನ್ನು ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿರುವ ತಾಲ್ಲೂಕಿನಲ್ಲಿರುವ ಪುರಾಣ ಪ್ರಸಿದ್ಧ ದೇವಸ್ಥಾನಗಳು ಕ್ಷೇತ್ರದ ಮಹಿಮೆಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ನಾನು ಶಾಸಕನಾಗಿ ಆಯ್ಕೆಯಾದ ದಿನದಂದಲೂ ಪುರೋಹಿತರಾದ ನಾರಾಯಣ ಭಟ್ ಅವರು, ಹೊಸ ರಥವನ್ನು ನಿರ್ಮಾಣ ಮಾಡಲು ಮನವಿ ಮಾಡಿದ್ದರು. ಅನೇಕರ ಶ್ರಮದಿಂದ ಇಂದು ಸಮರ್ಪಣೆ ಆಗಿರುವುದು ಸಂತೋಷ ತಂದಿದೆ.
ನೂತನ ರಥವನ್ನು ಸುರಕ್ಷಿತವಾಗಿಡಲು ತೇರು ಮನೆ ನಿರ್ಮಾಣಕ್ಕೆ ಈಗಾಗಲೇ ೧೦ ಲಕ್ಷ ಮಂಜೂರಾಗಿದ್ದು, ೩೦ಲಕ್ಷ ರೂಪಾಯಿ ಹೆಚ್ಚುವರಿ ಅನುದಾನದಲ್ಲಿ ಸುಂದರವಾದ ತೇರು ಮನೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿಬೇಸಿಗೆಯಲ್ಲಿ ಅವಘಡಗಳು ಹೆಚ್ಚು ಸಂಭವಿಸುತ್ತವೆ. ಸೇವೆಗೆ ಅವಕಾಶ ಕಲ್ಪಿಸಿ ಪಶು ಇಲಾಖೆಗೆ, ಅಗ್ನಿಶಾಮಕ ಹಾಗೂ ಪೋಲೀಸ್ ಇಲಾಖೆಗೆ ವಾಹನಗಳನ್ನು ವಿತರಿಸಲಾಗಿದೆ. ಸಣ್ಣಪುಟ್ಟ ವಿಷಯಗಳಿಗೆ ಯಾವುದೇ ಪ್ರಕರಣ ದಾಖಲಿಸದೇ ಪೋಲಿಸರು ರಾಜಿ ಸಂಧಾನ ಮಾಡುವ ಮೂಲಕ ತಾಲ್ಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂದು ತಿಳಿಸಿದರು.
ರಂಗನಾಥ ಸ್ವಾಮಿಯ ಪ್ರಧಾನ ಅರ್ಚಕ ಘನಪಾಠಿ ನಾರಾಯಣ ಭಟ್, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್, ಡಿವೈಎಸ್ ಪಿ. ಕೇಶವ, ಸಿಪಿಐ ಮಹಾಂತೇಶ್ ಲಂಬಿ, ತಹಶೀಲ್ದಾರ್ ಪುರಂದರ, ಇಒ ಶಶಿಧರ್, ಅನಿತಾ ಮಧು ಬಂಗಾರಪ್ಪ, ರಥ ಸಮರ್ಪಣಾ ಸಮಿತಿ ಅಧ್ಯಕ್ಷ ಹೆಚ್. ಗಣಪತಿ, ಪ್ರಧಾನ ಅರ್ಚಕ ಘನಪಾಟಿ ನಾರಾಯಣ ಭಟ್, ಭಾರತಿ ಶೆಟ್ಟಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಪ್ರಶಾಂತ್ ಮೇಸ್ತ್ರಿ, ಡಾಕಪ್ಪ, ಬಂದಗಿ ಬಸವರಾಜ್ ಶೇಟ್, ತಬಲಿ ಬಂಗಾರಪ್ಪ, ಶ್ರೀ ರಂಜನಿ, ಎಂ.ಡಿ.ಉಮೇಶ್, ಜೈಶೀಲಗೌಡ, ದಿವಾಕರ್ ಭಟ್‌ಭಾವೆ, ಶಿವಯೋಗಿ, ಷಣ್ಮುಖಾಚಾರ್, ಪರಶುರಾಮ್ ಸಣ್ಣ ಬೈಲ್,ಅಣ್ಣಪ್ಪಹಾಲಘಟ್ಟ , ಜಿ ಎಂ ತೋಟಪ್ಪ, ಎಂ.ಡಿ.ಉಮೇಶ್, ಗುರುಮೂರ್ತಿ, ಸದಾನಂದಗೌಡ ಹಲವರಿದ್ದರು.



