
ಶಿವಮೊಗ್ಗ :- ಕಿಡ್ನಿ ಕಸಿ ಅಪರೂಪದಲ್ಲದಿದ್ದರು, ಮೃತ ವ್ಯಕ್ತಿಯಿಂದ ಪಡೆದ ಕಿಡ್ನಿ ಕಸಿಯನ್ನು ಯಶಸ್ವಿಯಾಗಿ ನೆರವೇರಿಸುವುದು ಒಂದು ಸವಾಲಿನ ಕೆಲಸವೇ ಆಗುತ್ತದೆ. ಇಂತಹ ಒಂದು ಅಪರೂಪದ ವಿಶೇಷ ಹೆಗ್ಗಳಿಕೆಗೆ ನಮ್ಮ ಎನ್‌ಯು ಆಸ್ಪತ್ರೆ ಪಾತ್ರವಾಗಿದೆ. ಈ ಮೂಲಕ ಮಧ್ಯಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಕೈಗೊಂಡ ಯಶಸ್ವಿ ಆಸ್ಪತ್ರೆ ಇದಾಗಿದೆ ಎಂದು ಆಸ್ಪತ್ರೆಯ ಹಿರಿಯ ಮೂತ್ರಪಿಂಡ ತಜ್ಞ ಹಾಗೂ ಖ್ಯಾತ ಕಿಡ್ನಿ ತಜ್ಞರಾದ ಡಾ. ಪ್ರವೀಣ್ ಮಾಳವದೆ ಹೇಳಿದರು.

ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಸುಮಾರು 71 ವರ್ಷದ ಮಹಿಳೆಗೆ ಕಿಡ್ನಿ ತೊಂದರೆಯಿದ್ದು, ಹೃದಯ ರೋಗದ ಹಿನ್ನೆಲೆಯಲ್ಲಿ ಅವರು ಔಷಧಿಗಳನ್ನು ಬಳಸುತ್ತಿದ್ದರು. ಹಾಗಾಗಿ ಅವರಿಗೆ ಮೂತ್ರಪಿಂಡ ಶಸ್ತ್ರ ಚಿಕಿತ್ಸೆಯು ಅನಿವಾರ್ಯವಾಗಿದ್ದು, ದಾನಿಗಳಿಂದ ಮೂತ್ರಪಿಂಡ ಪಡೆಯಲು ನೋಂದಣಿ ಮಾಡಿಸಿಕೊಂಡಿದ್ದರು. ಮತ್ತು ಈ ರೀತಿಯ ಮೃತ ವ್ಯಕ್ತಿಯ ಕಿಡ್ನಿ ಕಸಿ ನೋಂದಣಿಗೆ ಮನ್ನಣೆ ಪಡೆದ ಏಕೈಕ ಆಸ್ಪತ್ರೆಯೂ ಕೂಡಾ ನಮ್ಮದಾಗಿದೆ ಎಂದರು.
ಈ ಕಿಡ್ನಿ ದಾನಿಯು ೬೫ ವರ್ಷದ ಪುರುಷನಾಗಿದ್ದು, ಈತ ರಸ್ತೆ ಅಪಘಾತಕ್ಕೊಳಗಾಗಿ, ಆಸ್ಪತ್ರೆಗೆ ಸೇರಿದ್ದರು. ಆತನ ಮೆದುಳು ನಿಷ್ಕ್ರಿಯಗೊಂಡಿದ್ದು, ಈತನ ಕುಟುಂಬದವರು ಮಾರ್ಚ್ 1, 2026ರಂದು ಅಂಗಾಂಗ ದಾನ ಮಾಡಲು ಒಪ್ಪಿಕೊಂಡಿದ್ದರು. ಅದರಂತೆ ಅವರ ಒಂದು ಕಿಡ್ನಿ ನಮ್ಮ ಎನ್‌ಯು ಆಸ್ಪತ್ರೆಗೆ ನೀಡಲಾಯಿತು. ಆ ಕಿಡ್ನಿಯನ್ನು ಈಗ ಈ ಮಹಿಳೆಗೆ ಕಸಿ ಮಾಡಲಾಗಿದೆ ಎಂದರು.
ಈ ಯಶಸ್ವಿ ಕಸಿ ಶಸ್ತ್ರ ಚಿಕಿತ್ಸೆಗೆ ಶಿವಮೊಗ್ಗ, ಮಂಗಳೂರು, ಉಡುಪಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಶೂನ್ಯ ಸಂಚಾರ ವಲಯ ಸೃಷ್ಟಿಸಿ ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಕಿಡ್ನಿಯನ್ನು ತಲುಪಿಸುವಲ್ಲಿ ಸಹಕಾರ ನೀಡಿದ್ದಾರೆ. ಅದರಲ್ಲೂ ಜೀರೋ ಟ್ರಾಫಿಕ್‌ನಲ್ಲಿ ಅಂಬ್ಯುಲೆನ್ಸ್ ಚಾಲಕ ಯತೀಶ್ ಆಚಾರ್ ಎಂಬುವವರು ಅತ್ಯಂತ ಕಡಿಮೆ ಅವಧಿಯಲ್ಲಿ ಕಿಡ್ನಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಇದಕ್ಕಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಡಾ. ಪ್ರದೀಪ್ ಎಂ.ಜಿ. ಅವರು ಮಾತನಾಡಿ, ಬಹು ಅಂಗಾಂಗಗಳನ್ನು ದಾನ ಮಾಡುವವರ ಸಂಖ್ಯೆ ನಮ್ಮಲ್ಲಿ ತುಂಬಾ ಕಡಿಮೆ ಇದೆ. ಮರಣಾ ನಂತರ ಜೀವದಾನ ಕುರಿತು ಅರಿವು ಮೂಡಿಸಬೇಕಾದ ಹೊಣೆ ನಮ್ಮೆಲ್ಲರದ್ದಾಗಿದೆ. ಶಿವಮೊಗ್ಗ ಸೇರಿದಂತೆ ಇಡೀ ಕರ್ನಾಟಕದಲ್ಲಿ ಈ ಬಗ್ಗೆ ಜಗೃತಿ ಮೂಡಿಸಬೇಕಾಗಿದೆ. ಈಗಾಗಲೇ ಎನ್‌ಯು ಆಸ್ಪತ್ರೆ ಕೂಡಾ ಮಧುಮೇಹ ಸೇರಿದಂತೆ ಕಿಡ್ನಿ ಸುರಕ್ಷತೆಯ ಬಗ್ಗೆ ಜಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಡಾ. ಆಕಾಶ್, ಡಾ.ಕಾರ್ತಿಕ್, ಘಟಕದ ಮುಖ್ಯಸ್ಥ ರೋಬಿನ್, ಇಮ್ಯಾನುವೆಲ್, ಪಿಆರ್‌ಒ ರವಿಕಿರಣ್ ಪೈ, ಸೇರಿದಂತೆ ಹಲವರು ಉಪಸ್ಥಿತರಿದ್ದರು.



