ಸಾಗರ :- ಇಲ್ಲಿನ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯ ವಿಧಿವಿಧಾನಗಳು ಪ್ರಾರಂಭಗೊಂಡಿದೆ. ಫೆ. 3ರಿಂದ ಫೆ. 11ರವರೆಗೆ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಅಂಕೆ ಹಾಕುವ ಶಾಸ್ತ್ರ ನಡೆಯಿತು. ಛಲವಾದಿ ಸಮಾಜದಿಂದ ಕೋಣನ ಪೂಜೆ ನಡೆಯಿತು. ನಂತರ ಕೋಣವನ್ನು ಮೆರವಣಿಗೆ ಮೂಲಕ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಕರೆ ತರಲಾಯಿತು. ಅಲ್ಲಿಂದ ಉಪ್ಪಾರ ಕೇರಿಯಲ್ಲಿರುವ ಪೋತರಾಜನ ಮನೆಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಣವನ್ನು ಪೂಜಿಸುವ ಕರೆತರುವ ಶಾಸ್ತ್ರವನ್ನು ಸಮಾಜದ ಪ್ರಮುಖರು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡಿದರೆ, ಪೋತರಾಜನ ಮನೆಯಲ್ಲಿ ಸಹ ಸಮಾಜ ಬಾಂಧವರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಉಪ್ಪಾರ ಕೇರಿಯ ಪೋತರಾಜನ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪೋತರಾಜನು ಆವೇಶಕ್ಕೆ ಒಳಗಾಗಿ ಚಾಟಿಯನ್ನು ಒಡೆದು ಕೊಳ್ಳುತ್ತಾ ತವರುಮನೆ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಯಿತು. ದೇವಸ್ಥಾನದಲ್ಲಿ ಮಂಡಲಕ್ಕೆ ಅಂಕೆ ಹಾಕುವ ಶಾಸ್ತ್ರ, ಊರಿನ ಗಡಿಗಳಿಗೆ ಅಂಕೆ ಹಾಕುವ ಶಾಸ್ತ್ರ, ಕಂಕಣ ಕಟ್ಟುವುದು ಹಾಗೂ ಪ್ರಮಾಣ ವಚನ ಸ್ವೀಕಾರ ಶಾಸ್ತ್ರ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್. ನಾಗೇಂದ್ರ, ಪೂಜಾ ಸಮಿತಿಯ ಸಂಚಾಲಕ ಬಸವರಾಜ್ ಅರ್ಚಕರಾದ ರವಿ ಪೋತರಾಜ, ಮಧುಕರ್ ಭಟ್, ದೇವಸ್ಥಾನ ಸಮಿತಿಯ ಗಿರಿಧರರಾವ್, ಸುಂದರ ಸಿಂಗ್, ನಾಗೇಂದ್ರ ಕುಮಟಾ, ನಾರಾಯಣ ಅರಮನೆಕೇರಿ, ಸೋಮಶೇಖರ್, ನಾಗೇಂದ್ರ, ನವೀನ್ ಕೆ.ಸಿ., ಪುರುಷೋತ್ತಮ, ರವಿನಾಯ್ಡು, ಚಂದ್ರು ಆರ್., ಜಯರಾಮ, ರಾಮು, ಲೋಕೇಶ್ ಕುಮಾರ್, ಗಂಗಾಧರ ಜಂಬಿಗೆ, ಉಮೇಶ್ ಚೌಟಗಿ, ಬಸವರಾಜ್, ಮನು ಪೂಜರಿ ಇನ್ನಿತರರು ಹಾಜರಿದ್ದರು.
ಮೂಲಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ

ಶ್ರೀ ಮಾರಿಕಾಂಬಾ ಜಾತ್ರೆ ಫೆ.. ೩ರಿಂದ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಇಂದು ಶ್ರೀ ಮಾರಿಕಾಂಬಾ ದೇವಿಯ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಕ್ಕೇರಿ ಅಘೋರೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಮಾರಿಕಾಂಬಾ ದೇವಿಯ ಮೂಲ ಗುಡಿಗೆ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ಕೋಶಾಧ್ಯಕ್ಷರು, ಸೇರಿದಂತೆ ವಿವಿಧ ಸಮಿತಿ ಸದಸ್ಯರು ಸ್ಥಳೀಯ ಗ್ರಾಮದ ಪ್ರಮುಖರು ಹಾಜರಿದ್ದರು.


