ನವದೆಹಲಿ :- ದೇಶಾದ್ಯಂತ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆಡಳಿತ ಪಕ್ಷವು ಸಾಮಾನ್ಯ ಜನರ ದುಡಿಮೆಯನ್ನು ‘ಕಂತುಗಳಲ್ಲಿ ಲೂಟಿ ಮಾಡುತ್ತಿದೆ’ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳು ಇಂದು ಮತ್ತೆ ಲೀಟರ್‌ಗೆ ೯೧ ಪೈಸೆವರೆಗೆ ಏರಿಕೆಯಾಗಿದ್ದು, ಇದು ಕಳೆದ ೧೦ ದಿನಗಳಲ್ಲಿ ನಡೆದಿರುವ ಮೂರನೇ ಹೆಚ್ಚಳವಾಗಿದೆ. ಈ ಬೆಲೆ ಏರಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಖರ್ಗೆ ಅವರು, ಈ ಹಿಂದೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿದ್ದಾಗಲೂ ಅದರ ಆರ್ಥಿಕ ಲಾಭವನ್ನು ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ವರ್ಗಾಯಿಸದೆ ವಂಚಿಸಿದೆ ಎಂದು ದೂರಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ವೈಫಲ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ.
ಪೆಟ್ರೋಲ್ ಬೆಲೆ ಈಗ ಮತ್ತೆ ೧೦೦ ರೂಪಾಯಿ ಗಡಿ ದಾಟಿದೆ ಎಂದು ಆಕ್ರೋಶ ಹೊರಹಾಕಿರುವ ಅವರು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿದಿನ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಕೇಂದ್ರ ತೆರಿಗೆ ವಿಧಿಸುತ್ತಿದ್ದರೂ ಬಿಜೆಪಿಯ ಹಸಿವು ತೀರುತ್ತಿಲ್ಲ. ಜಗತಿಕವಾಗಿ ತೈಲ ಬೆಲೆ ಕಡಿಮೆ ಇದ್ದಾಗ ಇವರು ಜನರಿಗೆ ರಿಯಾಯಿತಿ ನೀಡಲಿಲ್ಲ. ಬದಲಿಗೆ ನಿರಂತರವಾಗಿ ಸುಲಿಗೆ ಮಾಡಿದರು. ಈಗ ಬಿಕ್ಕಟ್ಟು ಎದುರಾದಾಗ ಚುನಾವಣೆಗಳಲ್ಲಿ ಮುಳುಗಿ, ಚುನಾವಣೆ ಮುಗಿದ ಮೇಲೆ ಜನರಿಗೆ ತ್ಯಾಗದ ಪಾಠ ಬೋಧಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.


