ಉಡುಪಿ :- ಬ್ರಹ್ಮಾವರ ತಾಲೂಕಿನ ಚಾಂತಾರು ಹೆರೆಂಜಾಲು ಗ್ರಾಮದ ಒಂದೂವರೆ ವರ್ಷದ ಪುಟ್ಟ ಕಂದ ದಕ್ಷ್ ಇನ್ನೂ ಜೀವನವನ್ನು ಸರಿಯಾಗಿ ನೋಡಲೂ ಆರಂಭಿಸದ ಆ ಮಗು, ವಿಧಿಯ ಕ್ರೂರ ಆಟಕ್ಕೆ ಬಲಿಯಾಗಿಬಿಟ್ಟಿದೆ.
ನಿನ್ನೆ ಬೆಳಿಗ್ಗೆ ತನ್ನ ಅಕ್ಕ ದಿಯಾಳನ್ನು ಶಾಲಾ ಬಸ್‌ಗೆ ಹತ್ತಿಸಲು ತಾಯಿ ಸುಚಿತ್ರ ಅವರು ದಕ್ಷ್ ನನ್ನು ಕೈಯಲ್ಲಿ ಎತ್ತಿಕೊಂಡು ಹೊರಟಿದ್ದರು. ಆಗ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ಕಳಚಿ ಬಿದ್ದ ಒಂದು ತೆಂಗಿನಕಾಯಿ ನೇರವಾಗಿ ದಕ್ಷ್ ನ ತಲೆಗೆ ಬಿದ್ದಿದೆ. ಕೂಡಲೇ ಮಗುವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ, ತಲೆಯ ಮೆದುಳಿಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಆ ಪುಟ್ಟ ಜೀವ ನಮ್ಮನ್ನೆಲ್ಲ ಅಗಲಿಬಿಟ್ಟಿದೆ.
ತಂದೆ ಪ್ರಶಾಂತ್ ಪೂಜಾರಿ ಮತ್ತು ತಾಯಿ ಸುಚಿತ್ರ ಪೂಜಾರಿ ಅವರು ಕಳೆದ 13 ವರ್ಷಗಳಿಂದ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದು, ದಿಯಾ ಎಂಬ 6 ವರ್ಷದ ಮಗಳೊಂದಿಗೆ ಸುಖದ ಕುಟುಂಬ ಜೀವನ ನಡೆಸುತ್ತಿದ್ದರು. ಆದರೆ ಒಂದು ಕ್ಷಣದಲ್ಲಿ ನಡೆದ ಈ ದುರ್ಘಟನೆ ಇಡೀ ಕುಟುಂಬವನ್ನು ಕತ್ತಲೆಗೆ ತಳ್ಳಿದೆ.
ಇಂದು ಅಂತಿಮ ದರ್ಶನ ಮತ್ತು ಅಂತ್ಯಸಂಸ್ಕಾರದ ವೇಳೆ ಸೇರಿದ ಜನಸ್ತೋಮ, ಎಲ್ಲರ ಕಣ್ಣಲ್ಲಿದ್ದ ಕಣ್ಣೀರು, ದಕ್ಷ್‌ನ ಮೇಲಿನ ಪ್ರೀತಿ ಎಷ್ಟಿತ್ತೋ ತೋರಿಸಿತು.
ಕೆಲವೊಮ್ಮೆ ಜೀವನ ಎಷ್ಟು ಅನ್ಯಾಯವಾಗಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ಅಲ್ಪ ಸಮಯದಲ್ಲೇ ತನ್ನ ನಗು, ಮುಗ್ಧತೆ ಮತ್ತು ಪ್ರೀತಿಯಿಂದ ಎಲ್ಲರ ಮನ ಗೆದ್ದಿದ್ದ ಪುಟ್ಟ ದಕ್ಷ್ ಈಗ ಕೇವಲ ನೆನಪು ಮಾತ್ರ… ಭಗವಂತನು ಆ ಪುಟ್ಟ ಕಂದನ ಆತ್ಮಕ್ಕೆ ಚಿರಶಾಂತಿ ನೀಡಲಿ. ದುಃಖದಲ್ಲಿರುವ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಕರುಣಿಸಲಿ.



