ಶಿವಮೊಗ್ಗ :- ಸಮಾಜದಲ್ಲಿ ಗೋಡೆಗಳನ್ನು ಕಟ್ಟುವ ಬದಲಿಗೆ, ವಿಭಜನೆಗಳಾಚೆಗೆ ಸೌಹಾರ್ದತೆಯ ಸೇತುವೆ ಕಟ್ಟಬೇಕಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಕರೆ ನೀಡಿದರು.
ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪದವಿ ಪ್ರಮಾಣಪತ್ರ ಪ್ರದಾನ ಕಾರ್ಯಕ್ರಮ ’ನ್ಯಾಯದೀಕ್ಷಾ’ ಉದ್ಘಾಟಿಸಿ ಮಾತನಾಡಿ, ಇಂದು ಭೌತಿಕ ಗೋಡೆಗಳಿಗಿಂತ, ಕಣ್ಣಿಗೆ ಕಾಣದ ಮಾನಸಿಕ ಮತ್ತು ಸಾಮಾಜಿಕ ಗೋಡೆಗಳು ಮನುಷ್ಯರನ್ನು ಹೆಚ್ಚು ದೂರ ಮಾಡುತ್ತಿವೆ. ಧರ್ಮ ಎಂಬ ಪದವನ್ನು ಯಾವುದೇ ಸೀಮಿತ ಅರ್ಥದಲ್ಲಿ ನೋಡಬಾರದು. ಧರ್ಮ ಎಂದರೆ ವಿಭಜನೆ ಅಲ್ಲ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣದ ಮಲ್ಯವಾಗಿ ಅರ್ಥೈಸಬೇಕು ಎಂದು ಹೇಳಿದರು.
ವಕೀಲರಾಗಿ ಹೊರಹೊಮ್ಮುತ್ತಿರುವ ಯುವ ಸಮೂಹ ನಿಮ್ಮ ತಂದೆ ತಾಯಿಗಳ ಕನಸುಗಳನ್ನು ಸಾಕಾರ ಮಾಡುತ್ತಿದ್ದಿರ ಎನ್ನುವ ಜವಾಬ್ದಾರಿ ಇರಲಿ. ಬಡತನದಿಂದ ಉದರ ಪೋಷಣೆಯೊಂದೆ ಅನಿವಾರ್ಯವಿದ್ದ ಕಾಲದಲ್ಲಿ, ತಮಗೆ ಸಿಗದ ಅವಕಾಶವನ್ನು, ತಮ್ಮ ಮಕ್ಕಳ ಮೂಲಕ ಯಶಸ್ವಿಗೊಳಿಸುವ ಪೋಷಕರ ಆಶಯಕ್ಕೆ ಸದಾ ಬೆಂಬಲವಾಗಿರಿ. ಅವರನ್ನು ಗೌರವಿಸುವಂತಹ ಮೊದಲ ದೀಕ್ಷೆ ಪಡೆಯಿರಿ. ಕಾನೂನಿನ ಪದವಿಯ ಜೊತೆಗೆ, ಸಮಾಜಮುಖಿಯಾಗಿ ಕಲಿತ ಜನವನ್ನು ತಲುಪಿಸುವುದು ಕೂಡ ಒಂದು ದೊಡ್ಡ ಹೊಣೆಗಾರಿಕೆ. ಏನಾದರಾಗು, ಮೊದಲು ಮಾನವನಾಗು ಎಂಬುದು ಕಾನೂನು ದೀಕ್ಷೆಯ ಮೊದಲ ಪಾಠವಾಗಬೇಕು ಎಂದರು.
ಮಣ್ಣಿನಲ್ಲಿರುವ ಚಿನ್ನದ ನಿಕ್ಷೇಪ ಆಭರಣದ ರೂಪ ಪಡೆಯಲು ಸಾಕಷ್ಟು ಸಂಸ್ಕರಣಾ ಪಕ್ರಿಯೆಬೇಕು. ವಿದ್ಯಾರ್ಥಿಗಳು ಕೂಡ ಮಣ್ಣಿನಲ್ಲಿರುವ ಚಿನ್ನವಿದ್ದಂತೆ. ಅವರನ್ನು ಸಂಸ್ಕರಿಸಿ, ಪುಟವಿಟ್ಟ ಚಿನ್ನದಂತೆ ಪದವಿಧರರಾಗಿ ರೂಪಿಸಿದ ಶ್ರೇಯಸ್ಸು ವಿದ್ಯಾಸಂಸ್ಥೆಯದಾಗಿದೆ. ಇದೀಗ ಯಾವ ಆಭರಣಕಾರನ ಕೈಯಲ್ಲಿ ಸಿಕ್ಕಿ, ಜೀವನಾನುಭವದ ಹೆಚ್ಚು ಪೆಟ್ಟು ತಿನ್ನುತ್ತಿರ, ಆಗ ಹೆಚ್ಚು ಹೊಳೆಯಲು ಪ್ರಾರಂಭಿಸುತ್ತಿರಿ ಎಂಬ ವಾಸ್ತವತೆಯ ಪ್ರe ಬೆಳೆಸಿಕೊಳ್ಳಿ. ಅದುವೆ ದೀಕ್ಷೆಯ ಮತ್ತೊಂದು ಹಂತ ಎಂದು ಹೇಳಿದರು.
ಸಾಮಾನ್ಯವಾಗಿ ಪದವಿ ಪ್ರಮಾಣಪತ್ರ ಪ್ರದಾನ ಸಮಾರಂಭದಲ್ಲಿದ್ದ ಗೌನ್ ಸಂಸ್ಕೃತಿಗೆ ತೆರೆ ಎಳೆದ ವಿದ್ಯಾರ್ಥಿಗಳು, ಶಲ್ಯದೊಂದಿಗೆ ನ್ಯಾಯದೀಕ್ಷೆ ಪಡೆದು ಸಂಭ್ರಮಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯಮೂರ್ತಿಗಳು ಸೇರಿದಂತೆ ಎನ್‌ಇಎಸ್ ಆಡಳಿತ ಮಂಡಳಿ ಸದಸ್ಯರು ಶರ್ಟು, ಪಂಚೆ, ಮೈಸೂರು ಪೇಟ ಹಾಗೂ ವಿಶೇಷ ಶಲ್ಯದಲ್ಲಿ ಮಿಂಚಿದರು. ಜೊತೆಯಲ್ಲಿ ಶಾಸ್ತ್ರೀಯ ಸಂಗೀತದ ಹಿನ್ನೆಲೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ವಿದ್ಯಾರ್ಥಿಗಳಿಗೆ ಪ್ರತಿಜವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲಾ ಅಧ್ಯಕ್ಷತೆ ವಹಿಸಿದ್ದರು.



