ಶಿವಮೊಗ್ಗ :- ಪ್ರಾಥಮಿಕ ಆರೋಗ್ಯದ ಕೇಂದ್ರಗಳು ಸೇರಿದಂತೆ ಜಿಲ್ಲೆಯ ತಾಲೂಕು ಕೇಂದ್ರದ ಆಸ್ಪತ್ರೆ ಗಳಲ್ಲಿ ವೈದ್ಯರ ಕೊರೆತೆ ಆಗದಂತೆ ನೋಡಿ ಕೊಳ್ಳಬೇಕು. ಖಾಲಿ ಇರುವ ವೈದ್ಯರ ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ನಿಗದಿತ ಕಾಲಮಿತಿಯೊಳಗೆ ಭರ್ತಿ ಮಾಡಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆಸಭೆ ನಡೆಸಿದ ಅವರು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಖಾಲಿ ಇರುವ ವೈದ್ಯರ ಸಂಖ್ಯೆ, ಔಷಧಿ ಕೊರತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ಸಮಗ್ರ ಮಾಹಿತಿ ಪಡೆದರು. ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಅವರು ಜಿಲ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಗಳು, ಖಾಲಿ ಇರುವ ಹುದ್ದೆಗಳ ಮಾಹಿತಿ ನೀಡಿದರು. ಖಾಲಿಹುದ್ದೆಗಳನ್ನು ನೇಮಕ ಮಾಡಲು ಪ್ರಯತ್ನಿಸಿದರೂ, ವೈದ್ಯ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ, ಹಾಗಾಗಿ ನೇಮಕದಲ್ಲಿ ತೊಂದರೆಯಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಕ್ಕಿಗೆ ಬಿಸಿ ಬಿಸಿ ಹಾಲು ಕೊಟ್ಟಂತೆ ಮಾಡಬೇಡಿ, ವೈದ್ಯರಾಗಲು ಮುಂದೆ ಬಂದವರಿಗೆ ತಕ್ಷಣವೇ ನೇಮಕಾತಿ ಪತ್ರಕೊಡಬೇಕು. ಜಿಲ್ಲಾಧಿಕಾರಿಗಳ ಬಳಿಗೆ, ನಾಳೆ ಬನ್ನಿ ಎಂದು ಸುಮ್ಮನೆ ಸತಾಯಿಸಬೇಡಿ. ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದಿದ್ದರೆ ಸಾಕಷ್ಡು ಸಮಸ್ಯೆ ಆಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಜನ ಸ್ನೇಹಿಯಾಗಿ ಮಾಡಲು ನಿಮ್ಮ ಮನ ಪರಿವರ್ತನೆಯೂ ಮುಖ್ಯ ಎಂದು ಸೂಚನೆ ನೀಡಿದರು.
ವೈದ್ಯರಾಗಲು ಮುಂದೆ ಬರುವಂತಹ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂತಹ ಕೆಲಸ ವೈದ್ಯರಿಂದಲೂ ಆಗಬೇಕೆಂದು ಸಲಹೆ ನೀಡಿದ ಸಚಿವರು, ಗಡಿ ಪ್ರದೇಶದಲ್ಲಿ ಕೆಲಸ ಮಾಡುವಂತಹ ವೈದ್ಯರಿಗೆ 15 ಸಾವಿರ ಹೆಚ್ಚುವರಿಯಾಗಿ ಕೊಡಲು ಯೋಚನೆ ಮಾಡಲಾಗಿದೆ. ಹಾಗೆಯೇ 60 ವರ್ಷದ ನಿವೃತ್ತಿಯ ಬಳಿಕವೂ ವೈದ್ಯರಿಗೆ ೬೫-೭೦ರ ತನಕ ಕೆಲಸಮಾಡುವ ಅವಕಾಶವನ್ನು ಸರ್ಕಾರ ಮಾಡಿದೆ. ಇದನ್ನು ಕೂಡ ಹೆಚ್ಚು ಪ್ರಚಾರಕ್ಕೆ ತನ್ನಿ. ಆಮೂಲಕ ವೈದ್ಯರ ಕೊರತೆಯನ್ನು ನೀಗಿಸಿ ಎಂದುಸಲಹೆ ನೀಡಿದರು.
ಈಗ ಸದ್ಯಕ್ಕೆ ಯಾವುದೇ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಯೋಚನೆ ಇಲ್ಲ ಎಂದು ಮೆಗ್ಗಾನ್ ವೈದ್ಯರ ಕೊರತೆ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಮೇಲ್ದರ್ಜೆಗೇರಿಸುವ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ, ಸಿಬ್ಬಂದಿ ನೇಮಕಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು.


