ಹೊಸನಗರ :- ತಾಲೂಕಿನ ಮೇಲಿನಬೇಸಿಗೆ ಗ್ರಾ.ಪಂ. ವ್ಯಾಪ್ತಿಯ ಗೋರಗೋಡು ಗ್ರಾಮದ 9 ವರ್ಷದ ಬಾಲಕ ನಂದನ್ ತನ್ನ ಸಾಹಸ ಹಾಗೂ ಸಮಯಪ್ರಜ್ಞೆಯಿಂದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ತನ್ನ ತಂದೆಯನ್ನು ಬದುಕಿಸಿಕೊಂಡ ಅಚ್ಚರಿಯ ಘಟನೆ ನಡೆದಿದೆ.
ನಂದನ್ ಮತ್ತು ತಂದೆ ಚಂದ್ರು ಗೊರಗೋಡು ಸಮೀಪದ ಹೊಳೆಯ ಬಳಿ ತೆರೆಳಿದ್ದರು. ಇದೇ ವೇಳೆ ಚಂದ್ರು ಅವರಿಗೆ ಏಕಾಏಕಿ ಫಿಟ್ಸ್ ಬಂದು ಜಾರಿ ಹೊಳೆಗೆ ಬಿದ್ದಿದ್ದು, ಹರಿಯುವ ನೀರಿನೊಂದಿಗೆ ಸುಮಾರು 2 ಕಿಲೋಮೀಟರ್ ದೂರ ತೇಲಿ ಹೋಗಿದ್ದಾರೆ. ಈ ದೃಶ್ಯವನ್ನು ಕಂಡ ನಂದನ್ ಗಾಬರಿಗೊಳ್ಳದೆ, ಹೊಳೆಯ ದಡದ ಉದ್ದಕ್ಕೂ ಸುಮಾರು 2 ಕಿಲೋಮೀಟರ್ ಓಡುತ್ತಾ ತಂದೆಯನ್ನು ಹುಡುಕಿದ್ದಾನೆ. ಬಳಿಕ ಸಮೀಪದ ಮನೆಗಳಿಗೆ ಧಾವಿಸಿ, “ನನ್ನ ತಂದೆ ಹೊಳೆಯಲ್ಲಿ ತೇಲಿ ಹೋಗಿದ್ದಾರೆ, ಬನ್ನಿ ಕಾಪಾಡಿ” ಎಂದು ಸ್ಥಳೀಯರ ನೆರವು ಕೋರಿದ್ದಾನೆ.
ತಕ್ಷಣವೇ ಸ್ಥಳಕ್ಕೆ ಬಂದ ಗ್ರಾಮಸ್ಥರು ಹೊಳೆಯಲ್ಲಿ ಹುಡುಕಾಟ ಆರಂಭಿಸಿದರು. ಈ ವೇಳೆ ಹೊಳೆಯಲ್ಲಿ ತೇಲುತ್ತಿದ್ದ ಜರ್ಕಿನ್‌ನ್ನು ನಂದನ್ ಗುರುತಿಸಿ, ಅದೇ ಸ್ಥಳದಲ್ಲಿ ತಂದೆ ಇರಬಹುದೆಂದು ತಿಳಿಸಿದ್ದಾನೆ. ಕೂಡಲೇ ಸ್ಥಳೀಯರು ಚಂದ್ರು ಅವರನ್ನು ದಡಕ್ಕೆ ಎಳೆದು ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಸಾಹಸಿ ಬಾಲಕನಿಗೆ ಮೆಚ್ಚುಗೆ: ತಂದೆ ಅಪಾಯದಲ್ಲಿದ್ದಾಗ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ನಡೆದುಕೊಂಡ ನಂದನ್ ಜಿ.ಸಿ ಅವರ ಸಾಹಸಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ನಂದನ್ ಗೋರಗೋಡು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿಯಾಗಿದ್ದು, ಸಾಹಸಿ ನಂದನ್‌ಗೆ ಸರ್ಕಾರ ಪ್ರಶಸ್ತಿ ಹಾಗೂ ಶಿಕ್ಷಣಕ್ಕೆ ಸಹಾಯಧನ ನೀಡಲು ಸ್ಥಳೀಯರು ಒತ್ತಾಯಿಸಿದ್ದಾರೆ.


