ಶಿವಮೊಗ್ಗ : ಜಿಲ್ಲಾ ಕೇಂದ್ರದಿಂದ ರಾಜಧಾನಿಯವರೆಗೆ ಬೆಳೆಯುವಲ್ಲಿ ಸಿ.ಎಸ್. ಷಡಾಕ್ಷರಿಯವರಲ್ಲಿದ್ದ ಬದ್ಧತೆ, ಪ್ರಾಮಾಣಿಕತೆ, ಸತತ ಪರಿಶ್ರಮಗಳೇ ಪ್ರಮುಖ ಕಾರಣ. ಇದರೊಂದಿಗೆ ಅವರಲಿದ್ದ ಸೇವಾ ಮನೋಭಾವ ಮತ್ತು ಹಿಡಿದ ಕೆಲಸ ಸಾಧಿಸಬೇಕೆಂಬ ಛಲ ಅವರನ್ನು ಇನ್ನಷ್ಟು ಎತ್ತರಕ್ಕೆ ಏರುವಂತೆ ಮಾಡಿದವು ಎಂದು ಹಿರಿಯ ವಕೀಲ ಕೆ.ಬಸಪ್ಪಗೌಡ ಅವರು ಶ್ಲಾಘಿಸಿದರು.
ಅವರು ನಿನ್ನೆ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಿ.ಎಸ್. ಷಡಾಕ್ಷರಿ ಅಭಿಮಾನಿ ಬಳಗದಿಂದ ರಾಜ್ಯ ಸರ್ಕಾರಿ ನೌಕರರ ಸೇವಾ ವಿಕಾಸ ಕೇಂದ್ರದಲ್ಲಿ ಸಿ.ಎಸ್.ಷಡಾಕ್ಷರಿ ಅವರ ೪೭ನೇ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಇಲಾಖೆಯಲ್ಲಿ ಸಾಮಾನ್ಯ ಹುದ್ದೆಗೆ ನೇಮಕಗೊಂಡು ರಾಜ್ಯಾಧ್ಯಕ್ಷ ಸ್ಥಾನದವರೆಗಿನ ಸಾಧನೆ ಸಾಮಾನ್ಯವೇನಲ್ಲ ಎಂದರಲ್ಲದೆ, ಯಾವ ವ್ಯಕ್ತಿಯಲ್ಲಿ ಸಾಮಾಜಿಕ ಕಳಕಳಿಯ ಗುಣಗಳಿರುತ್ತವೆಯೋ ಅಂತವರಿಗೆ ಎಲ್ಲಾ ಸ್ಥಾನಮಾನಗಳು ಸಹಜವಾಗಿ ಹುಡುಕಿಕೊಂಡು ಬರುತ್ತವೆ ಎಂದರು. ಷಡಾಕ್ಷರಿ ಅವರು ಕೇವಲ ಸರ್ಕಾರಿ ನೌಕರರಿಗೆ ನಾಯಕ ರಾಗದೇ ರಾಜ್ಯದ ಎಲ್ಲಾ ವರ್ಗದ ಜನರ ನಾಯಕರಾಗುವಂತಹ ಅವಕಾಶ ದೊರೆಯುವಂತಾಗಲಿ ಎಂದು ಆಶಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಷಡಾಕ್ಷರಿಯವರು ಸರ್ಕಾರದೊಂದಿಗೆ ಸೌಹಾರ್ದ ಯುತವಾಗಿ, ಸ್ನೇಹ ಪೂರ್ವಕ ವಾಗಿದ್ದುಕೊಂಡು ಅತ್ಯಂತ ಜಾಣ್ಮೆ ಯಿಂದ ಸಂಘದ ಹಾಗೂ ರಾಜ್ಯದ ನೌಕರರ ಬೇಡಿಕೆಗಳನ್ನು ಈಡೇರಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಷಡಾಕ್ಷರಿಯವರಲ್ಲಿ ಗುರುತಿಸಬಹುದಾದ ಗುಣಲಕ್ಷಣ ಎಂದವರು ನುಡಿದರು.
ಸಂಘಟನೆ, ಬದ್ದತೆ, ಬುದ್ದಿವಂತಿಕೆ ಇವೆಲ್ಲವನ್ನೂ ಮೈಗೂಡಿಸಿ ಕೊಂಡಾಗ ನಾಯಕರಾಗಿ ಬೆಳೆಯಲು ಸಾಧ್ಯ, ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯದೇ ಸಂಘಟನೆ ಹಾಗೂ ಸಂಘವೇ ನನ್ನ ಮೂಲ ಕಾರ್ಯ ಎಂಬ ಉದ್ದೇಶದಿಂದ ಈಗಲೂ ಕಾರ್ಯ ನಿರ್ವಹಿಸು ತ್ತಿದ್ದಾರೆ. ಇದರ ಪರಿಣಾಮವೇ ಸಾವಿರಾರು ಸಂಖ್ಯೆಯಲ್ಲಿ ನೌಕರರ ಸಮೂಹ ಹಾಗೂ ಅವರ ಹಿತೈಷಿಗಳು ಸೇರಿರುವುದು ಅವರ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಮುಖರಾದ ಡಾ. ಸತೀಶ್‌ಕುಮಾರ್ ಶೆಟ್ಟಿ, ಡಿಎಸ್‌ಎಸ್ ಗುರುಮೂರ್ತಿ, ಡಾ. ವಾಣಿಕೋರಿ, ಮ.ಸ. ನಂಜುಂಡ ಸ್ವಾಮಿ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಮೋಹನ್ ಕುಮಾರ್, ಬಳ್ಳೆಕೆರೆ ಸಂತೋಷ್, ಆರ್.ಪಾಪಣ್ಣ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಿ.ಎಸ್. ಷಡಾಕ್ಷರಿ ಅವರ ಅಭಿಮಾನಿಗಳು ಭಾಗವಹಿಸಿದ್ದರು. ಷಡಾಕ್ಷರಿ ತಾಯಿ ಬೋರಾಂಬಿಕಾ, ಪತ್ನಿ ಬೇಬಿ, ಮಕ್ಕಳು ಸೇರಿದಂತೆ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.


