ಶಿವಮೊಗ್ಗ :- ಇಂದು ಮಹಾನಗರಪಾಲಿಕೆ ವ್ಯಾಪ್ತಿಯ ಆಲ್ಕೊಳ ವೃತ್ತದಿಂದ ಡಿವಿಜಿ ವೃತ್ತದವರೆಗೆ 100ಅಡಿ ದ್ವಿಪಥ ರಸ್ತೆಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ರಸ್ತೆ ಎಂದು ನಾಮ ಫಲಕ ಉದ್ಘಾಟನೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 290 ಮನೆಗಳಿಗೆ ಹಕ್ಕುಪತ್ರಗಳ ವಿತರಣೆ ಹಾಗೂ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಬಂಗಾರಪ್ಪ ಅವರು ಬಡವರಿಗೆ ಸೂರು ಒದಗಿಸುವ ಆಶ್ರಯ, ಆರಾಧನಾ, ಅಕ್ಷಯ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಹೀಗೆ ಬಡವರ ಏಳ್ಗೆಗಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಬಂಗಾರಪ್ಪನವರ ಹೆಸರನ್ನು ಗೋಪಾಲಗೌಡ ಬಡಾವಣೆಯ ರಸ್ತೆಗೆ ನಾಮಕರಣ ಮಾಡುವ ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಂಗಾರಪ್ಪನವರ ಯೋಜನೆಗಳು, ಕಾರ್ಯಕ್ರಮಗಳು ಸದಾ ಹಸಿರಾಗಿವೆ. ಹಕ್ಕುಪತ್ರಗಳನ್ನು ವಿತರಣೆ ಮಾಡುವುದರಲ್ಲಿ ಕೂಡ ಅವರ ಚಿಂತನೆ ಇದೆ. ಗೋಪಾಲಗೌಡರ ಜಯಂತಿಯಂದು ಬಂಗಾರಪ್ಪ ರಸ್ತೆ ನಾಮಕರಣವಾಗುತ್ತಿರುವುದು ಹಿರಿಯ ಚೇತನಗಳ ಆಶೀರ್ವಾದವಾಗಿದೆ ಹಾಗೂ ಉಸ್ತುವಾರಿ ಸಚಿವನಾಗಿ ಈ ಕಾರ್ಯಕ್ರಮ ಉದ್ಘಾಟಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಮತ್ತು ನನ್ನ ಪುಣ್ಯ ಎಂದ ಅವರು ಬಂಗಾರಪ್ಪನವರ ತತ್ವ, ಸಿದ್ದಾಂತಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದೇನೆ ಎಂದರು.
ಆಶ್ರಯ, ಆರಾಧನಾ, ಗ್ರಾಮೀಣ ಕೃಪಾಂಕ ಯೋಜನೆಗಳು ರೈತರ 20 ಹೆಚ್‌ಪಿ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿ ರೈತರ ನೆರವಿಗೆ ಬಂದಿರುವುದನ್ನು ನಾವು ಸದಾ ಸ್ಮರಿಸಬೇಕು. ಈ ಯೋಜನೆಗಳಿಂದ ರೈತರು ಆರ್ಥಿಕವಾಗಿ ಸುಧಾರಣೆಯಾಗುತ್ತಿರುವುದನ್ನು ನೋಡಿ ಸಂತೋಷವಾಗುತ್ತದೆ ಎಂದರು.
ಶಾಸಕ ಚನ್ನಬಸಪ್ಪಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಶಾಸಕ ಬಲ್ಕೀಶ್ ಬಾನು, ರಾಜ್ಯ ಜವಳಿ ಮೂಲ ಸೌಲಭ್ಯ(ವಿದ್ಯುತ್ ಮಗ್ಗಗಳ) ನಿಗಮದ ಅಧ್ಯಕ್ಷ ಚೇತನ್, ಗ್ಯಾರೆಂಟಿ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ಡಾ.ಜಿ.ಡಿ.ನಾರಾಯಣಪ್ಪ ಮಾತನಾಡಿದರು. ಜಿಲ್ಲಾಧಿಕಾರಿ, ಪ್ರಭುಲಿಂಗ ಕವಳಿಕಟ್ಟಿ, ಎಸ್.ಪಿ. ನಿಖಿಲ್, ಪಾಲಿಕೆ ಆಯುಕ್ತ ಮಾಯಣ್ಣಗೌಡ ಇನ್ನಿತರರಿದ್ದರು.


