ಶಿವಮೊಗ್ಗ :- ನಗರದ ಜೀವನಾಡಿ ಹಾಗೂ ಸಮೃದ್ಧಿಯ ಸಂಕೇತವಾಗಿ ಮೈದುಂಬಿ ಹರಿಯುತ್ತಿರುವ ಜೀವನದಾಯಿನಿ ತಾಯಿ ತುಂಗಾ ನದಿಗೆ ಬಾಗಿನ ಅರ್ಪಿಸುವುದು ನಮ್ಮ ನಾಡಿನ ಪವಿತ್ರ ಪರಂಪರೆ ಮತ್ತು ಕೃತಜ್ಞತೆಯ ಸಂಕೇತವಾಗಿದೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದರು.
ಇಂದು ಬಿಜೆಪಿ ಶಿವಮೊಗ್ಗ ನಗರ ಘಟಕದ ವತಿಯಿಂದ, ಕೋಟೆ ರಸ್ತೆಯ ಐತಿಹಾಸಿಕ ಶ್ರೀ ಕೋರ್ಪಳಯ್ಯನ ಛತ್ರದ ಆವರಣದಲ್ಲಿ ಮೈದುಂಬಿ ಹರಿಯುತ್ತಿರುವ ತಾಯಿ ತುಂಗೆಗೆ ಭಕ್ತಿಪೂರ್ವಕ ವಾಗಿ ಬಾಗಿನ ಸಮರ್ಪಿಸಿ, ಮಾನ್ಯ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಯಿ ತುಂಗೆಯ ಅನಂತ ಕೃಪೆಯಿಂದ ನಮ್ಮ ಶಿವಮೊಗ್ಗ ನಗರ ಹಾಗೂ ಇಡೀ ಜಿಲ್ಲೆಯಲ್ಲಿ ಸದಾ ಸುಭಿಕ್ಷೆ, ಸಮೃದ್ಧಿ ನೆಲೆಸಲಿ. ನಮ್ಮ ಭಾಗದ ಅನ್ನದಾತರ ಮೊಗದಲ್ಲಿ ನಿರಂತರ ಮಂದಹಾಸ ಮೂಡಿ, ಪ್ರತಿಯೊಬ್ಬ ನಾಗರಿಕನಿಗೂ ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಸೌಹಾರ್ದತೆ ಸಿಗಲಿ ಎಂದು ಪ್ರಾರ್ಥಿಸಿದರು.
ಬಿಜೆಪಿ ರಾಜ್ಯ ಪ್ರಕೋಷ್ಟಸಂಯೋಜಕ ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್, ನಗರ ಅಧ್ಯಕ್ಷ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಹಾಗೂ ಇನ್ನಿತರರಿದ್ದರು.


