<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ : ಬಿವೈಆರ್

Banner Ad
ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ : ಬಿವೈಆರ್

ಶಿವಮೊಗ್ಗ :- ದೇಶದ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವ ಸಂಕಲ್ಪ ಮಾಡೋಣ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.

ಇಂದು ನಗರದ ಶೀನಪ್ಪಶೆಟ್ಟಿ ವೃತ್ತ(ಗೋಪಿ ವೃತ್ತ)ದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಬಿಜೆಪಿ ಶಿವಮೊಗ್ಗ ನಗರ ಸಮಿತಿ ವತಿಯಿಂದ ರಾಮಣ್ಣಶ್ರೇಷ್ಟಿ ಪಾರ್ಕ್‌ನಿಂದ ಗೋಪಿ ವೃತ್ತದವರೆಗೆ ಹಮ್ಮಿಕೊಂಡಿದ್ದ ಭವ್ಯ ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಏಕ ಭಾರತ್ ಶ್ರೇಷ್ಠ ಭಾರತ್ ತಿರಂಗಾ ಯಾತ್ರೆ ಮೂಲಕ ದೇಶದ ಜನರನ್ನು ಒಗ್ಗೂಡಿಸುವ ಮತ್ತು ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ಬಗ್ಗೆ ಜಗೃತಿ ಮೂಡಿಸುವ ಸಲುವಾಗಿ ಈ ತಿರಂಗಾ ಯಾತ್ರೆ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಯೋಧರನ್ನು ಸ್ಮರಿಸುವ ದಿನವಾಗಿದೆ. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮತ್ತು ಸರ್ಕಾರಿ ಸಮಾರಂಭಗಳಲ್ಲಿ ವಂದೇ ಮಾತರಂ ಹಾಡಬೇಕೆಂದು ಕೇಂದ್ರ ಸರ್ಕಾರ ಕಾನೂನು ಮಾಡಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾತಂತ್ರ್ಯ ಘೋಷಿಸಿದ ಶಿಕಾರಿಪುರದ ಈಸೂರು ಗ್ರಾಮದಿಂದ ಬ್ರಿಟೀಷರ ವಿರುದ್ಧ ಹೋರಾಡಿ 5 ಜನರನ್ನು ಸಾಮೂಹಿಕವಾಗಿ ಗಲ್ಲಿಗೇರಿಸಿದ್ದನ್ನು ನಾವು ಕೇಳಿದ್ದೇವೆ. ಇಂದು ಈ ರೀತಿಯ 9 ಟ್ಯಾಬ್ಲೋಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸುವುದು ಉತ್ತಮ ಕಾರ್ಯವಾಗಿದೆ. ಸ್ವಾತಂತ್ರ್ಯ ಯೋಧರ ತ್ಯಾಗ ಅರ್ಥ ಮಾಡಿಕೊಳ್ಳಲು ಈ ಕಾರ್ಯಕ್ರಮ ಮಾಡಿದ್ದು, ಇನ್ನಾದರೂ ನಾವು ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವನ್ನು ಅರಿತುಕೊಳ್ಳಲೇಬೇಕು. ಲಕ್ಷಗಟ್ಟಲೇ ಜನ ಪ್ರಾಣ ತೆತ್ತಿದ್ದಾರೆ. ಅವರ ತ್ಯಾಗಕ್ಕಾಗಿ ನಮ್ಮಿಂದ ಏನಾದರೂ ದೇಶಕ್ಕೆ ಕೊಡುಗೆ ಕೊಡುವ ರೂಪದಲ್ಲಿ ನಾವು ನಮ್ಮ ಜೀವನವನ್ನು ಬೆಳೆಸಿಕೊಂಡು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಒಂದಾಗೋಣ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಆ. 14ರ ರಾತ್ರಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ಅಖಂಡ ಭಾರತ ತುಂಡಾಗಿದ್ದೂ ಕೂಡ ಇವತ್ತೇ. ಆ ನೋವಿನ ಕತೆಯ ನೆನಪು ಮಾಡಿಕೊಳ್ಳುವ ಸ್ಥಿತಿ ಇಂದು ನಮಗೆ ಬಂದೊದಗಿದೆ. ಸ್ವಾತಂತ್ರ್ಯಕ್ಕೆ ಕಿಚ್ಚು ಕೊಟ್ಟಿದ್ದೇ ಯುವಕರು. ಯುವ ನಾಯಕ ಮದನ್‌ಲಾಲ್ ಬಿಂಗ್ರಾ ಈ ಹೋರಾಟದಲ್ಲಿ ಮೊದಲು ಬದಲಿಯಾಗಿದ್ದರು. ವೀರ ಸಾವರ್ಕರ್‌ಗೆ ಎರಡು ಬಾರಿ ಜೀವಾವಧಿ ಶಿಕ್ಷೆಯಾಗಿತ್ತು. ಈ ರೀತಿಯ ಉದಾಹರಣೆ ಬೇರೊಂದಿಲ್ಲ. ವಾಸುದೇವ ಬಲವಂತರಾವ್ ಪಡ್ಕೆ, ಭಗತ್ ಸಿಂಗ್, ರಾಜ್ ಗುರು, ಸುಖದೇವ್, ಮೊದಲಾದ ವೀರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟರು. ದೇಶ ಉಳಿಸಿದರು. ಸ್ವಾತಂತ್ರ್ಯ ತಂದುಕೊಟ್ಟರು. ನಾವು ಕನಿಷ್ಠ ಸಮಯವನ್ನಾದರೂ ದೇಶಕ್ಕಾಗಿ ಕೊಡೋಣ. ದೇಶ ಉಳಿಸೋಣ, ತಿರಂಗಾ ಯಾತ್ರೆಯ ಮೂಲಕ ದೇಶದ ರಥವನ್ನು ಎಳೆದುಕೊಂಡು ಬಂದು ಜಗೃತಿ ಮತ್ತು ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ ಎಂದರು.

ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಸಾವಿರಾರು ವಿದ್ಯಾರ್ಥಿಗಳ ಜೊತೆಗೆ ಈ ಬೃಹತ್ ತಿರಂಗಾ ಯಾತ್ರೆ 9 ವೈವಿಧ್ಯಮಯ ಸ್ವಾತಂತ್ರ್ಯ ಹೋರಾಟಗಾರರ ಟ್ಯಾಬ್ಲೋಗಳೊಂದಿಗೆ ಗೋಪಿ ವೃತ್ತದವರೆಗೆ ಈ ತಿರಂಗಾ ಯಾತ್ರೆ ಸಾಗಿ ಬಂದಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಎಸ್. ದತ್ತಾತ್ರಿ, ಜ್ಯೋತಿಪ್ರಕಾಶ್, ವೀರಭದ್ರಪ್ಪ ಪೂಜರ್, ಹರಿಕೃಷ್ಣ, ಮೋಹನ್ ರೆಡ್ಡಿ, ಮಂಜುನಾಥ್, ಸುರೇಖಾ ಮುರಳೀಧರ್, ಸುನಿತಾ ಅಣ್ಣಪ್ಪ, ರಶ್ಮಿ ಶ್ರೀನಿವಾಸ್, ವಿಶ್ವನಾಥ್, ಪ್ರದೀಪ್ ಹೊನ್ನಪ್ಪ, ರಾಜೇಶ್ ಕಾಮತ್ ಮತ್ತಿತರರು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *