ಶಿವಮೊಗ್ಗ :- ನಗರದ ಕೋಟೆ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನ ಈಗ ಬಿ ಗ್ರೇಡ್ ನಲ್ಲಿದೆ. ಅದನ್ನು ಎ ಗ್ರೇಡ್‌ಗೆ ತೆಗೆದುಕೊಂಡು ಹೋಗಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಸಮಿತಿಯ ನೂತನ ಅಧ್ಯಕ್ಷ ಕೆ. ದೇವೇಂದ್ರಪ್ಪಹೇಳಿದರು.
ಅವರು ಇಂದು ಕೋಟೆ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿ, ದೇವಸ್ಥಾನದ ಶಿಷ್ಟಾಚಾರ ಪಾಲನೆ ಮಾಡಲಾಗುವುದು. ಪಾವಿತ್ರ್ಯತೆ ಕಾಪಾಡಲಾಗುವುದು. ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಬದ್ಧವಾಗಿದ್ದೇವೆ ಎಂದರು.
ಸುಮಾರು ೪೦೦ ವರ್ಷಗಳ ಇತಿಹಾಸವಿರುವ ತುಂಗಾ ನದಿ ದಡದಲ್ಲಿರುವ ಈ ಪುಣ್ಯಕ್ಷೇತ್ರವು ಭಕ್ತರ ಶ್ರದ್ಧಾ ಕೇಂದ್ರವಾಗಿದೆ. ಕೋಟೆ ಸೀತಾರಾಮ ಆಂಜನೇಯ ಸ್ವಾಮಿ ದೇವಸ್ಥಾನವು ದೇವರ ಶಕ್ತಿಯ ದೇವಸ್ಥಾನವಾಗಿದ್ದು, ಭಕ್ತಿಯಿಂದ ಬೇಡಿ ಬರುವ ಎಲ್ಲಾ ಭಕ್ತರ ಸಂಕಲ್ಪಗಳನ್ನು ಈಡೇರಿಸುವ ಅದ್ಭುತ ಕೇಂದ್ರವಾಗಿದೆ ಎಂದು ತಿಳಿಸಿದರು.
ದೇವಸ್ಥಾನವನ್ನು ಬಿ. ಗ್ರೇಡ್ ನಿಂದ ಎ. ಗ್ರೇಡ್ ಗೆ ತರುವುದು ತಮ್ಮ ಮೊದಲ ಆದ್ಯತೆಯಾಗಿದೆ. ದೇವಸ್ಥಾನದ ಎಲ್ಲಾ ಆದಾಯ-ವೆಚ್ಚದ ಲೆಕ್ಕವನ್ನು ಪಾರದರ್ಶಕವಾಗಿ ಇಡಲಾಗುವುದು. ದಾನಿಗಳ ಹಣವನ್ನು ಮೊಬೈಲ್ ಮೂಲಕ ಸಂಗ್ರಹಿಸಿ ಸರಿಯಾದ ರೀತಿಯಲ್ಲಿ ಬಳಸಲಾಗುವುದು ಎಂದು ಹೇಳಿದರು.
ದೇವಸ್ಥಾನದ ಪವಿತ್ರತೆ ಮತ್ತು ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಯುವಜನರನ್ನು ಒಳಗೊಂಡ ಹೊಸ ಸಮಿತಿಯನ್ನು ರಚಿಸಿ, ದೇವಸ್ಥಾನದ ಆವರಣದಲ್ಲಿ ಭಕ್ತಿ ಮತ್ತು ಚೈತನ್ಯ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ದಾನಿಗಳ ಸಹಕಾರದಿಂದ ಸೇವಾ ಕಾರ್ಯಗಳನ್ನು ಹೆಚ್ಚಿಸಲಾಗುವುದು. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಗೌರವ ಸಮಾರಂಭ ನಡೆಸಲಾಗುವುದು ಎಂದರು. ಇಲ್ಲಿನ ಪ್ರಧಾನ ಅರ್ಚಕರಿಗೆ ಕಳೆದ ಮೂರು ವರ್ಷಗಳಿಂದ ಸರ್ಕಾರ ಗೌರವಧನ ನೀಡಿಲ್ಲ. ಅದನ್ನು ಕೂಡಲೇ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನ ಅರ್ಚಕ ರಾಮ ಪ್ರಸಾದ್ ಅವರು ಮಾತನಾಡಿ, ಶ್ರಾವಣ ಮಾಸದ ಪ್ರಯುಕ್ತ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ವರ್ಷ ನಾಲ್ಕು ಶನಿವಾರಗಳು ಬರುತ್ತಿವೆ. ಸುಗ್ರೀವ ಪಟ್ಟಾಭಿಷೇಕ, ಸೀತಾ ಮುದ್ರಿಕಾ ಪ್ರಧಾನ ಸೇರಿದಂತೆ ವಿಶೇಷ ಅಲಂಕಾರಗಳನ್ನು ಆಂಜನೇಯ ಸ್ವಾಮಿಗೆ ಮಾಡಲಾಗುವುದು. ಪ್ರತಿ ಶನಿವಾರ ಅನ್ನದಾಸೋಹ ಇರುತ್ತದೆ. ಕೊನೆಯ ಶನಿವಾರ ತಿರುಪತಿ ವೆಂಕಟರಮಣ ಅಲಂಕಾರ ಇರುತ್ತದೆ. ಆ ದಿನ ಭಕ್ತರಿಗೆ ಲಡ್ಡು ಪ್ರಸಾದವನ್ನು ನೀಡಲಾಗುವುದು ಎಂದು ತಿಳಿಸಿದರು.
ನಾಳೆಯಿಂದ ಆರಂಭವಾಗುವ ಮೊದಲ ಶ್ರಾವಣ ಶನಿವಾರದ ಪ್ರಯುಕ್ತ ಬರುವ ಎಲ್ಲಾ ಭಕ್ತರಿಗೆ ಮಧ್ಯಾಹ್ನದ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಎಲ್ಲಾ ಭಕ್ತರು ಈ ಪುಣ್ಯಕ್ಷೇತ್ರಕ್ಕೆ ಆಗಮಿಸಿ ಶ್ರೀ ಸಂತೋಷಿ ಮಹಾರಾಜ ಆಂಜನೇಯ ಸ್ವಾಮಿಯ ದರ್ಶನ ಪಡೆಯುವಂತೆ ಮನವಿ ಮಾಡಿದರು. ಸಮಿತಿಯ ಪದಾಧಿಕಾರಿಗಳಾದ ಎ.ಎಚ್. ಸುನೀಲ್, ಶ್ರೀಧರಮೂರ್ತಿ ನವಿಲೆ, ಎಸ್.ಟಿ. ಚಂದ್ರಶೇಖರ್, ರೇಖಾ ರಂಗನಾಥ್, ಆರ್. ರಾಜಶೇಖರ್, ಎಚ್.ಎಸ್. ಬಾಲಾಜಿ ಶೆಟ್ಟಿ, ರೂಪ, ಸುಧಾ ರಾಮಪ್ರಸಾದ್ ಉಪಸ್ಥಿತರಿದ್ದರು.


