ಶಿವಮೊಗ್ಗ :- ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪಡೆಯುತ್ತಿರುವ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಂದೇ ಪ್ರಾಂಗಣದಲ್ಲಿ ಎಲ್.ಕೆ.ಜಿ.ಯಿಂದ 12ನೇ ತರಗತಿಯವರೆಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಎರಡರಲ್ಲೂ ಗುಣಾತ್ಮಕ ಶಿಕ್ಷಣ ನೀಡುವ, ಸ್ಮಾರ್ಟ್ ತರಗತಿ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ 1ಸಾವಿರ ಸುಸಜ್ಜಿತ ಸರ್ಕಾರಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಾದರಿ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಹಂತಹಂತವಾಗಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಿ.ಎಸ್.ಆರ್.ನಿಧಿಯಡಿ ನಗರದ ಬಿ.ಹೆಚ್.ರಸ್ತೆಯ ಸೈನ್ಸ್ ಮೈದಾನದಲ್ಲಿ ಎಜಕ್ಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ ನಿರ್ಮಿಸಲು ಉದ್ದೇಶಿಸಿರುವ ನೂತನ ಶಾಲಾ ಕಟ್ಟಡದ ಶಂಕುಸ್ತಾಪನೆ ನೆರವೇರಿಸಿ ಮಾತನಾಡಿ, ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 500ಕೆ.ಪಿ.ಎಸ್.ಶಾಲೆಗಳನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ಕರ್ನಾಟಕ ಕೆ.ಪಿ.ಎಸ್.ಶಾಲೆಗಳ ರಾಜ್ಯ ಮಟ್ಟದ ಉದ್ಘಾಟನೆ ಮತ್ತು ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮವನ್ನು ಶೀಘ್ರದಲ್ಲಿ ಶಿವಮೊಗ್ಗದಲ್ಲಿಯೇ ಆಯೋಜಿಸಲಾಗುವುದು ಎಂದರು.
ಅಲ್ಲದೇ 1000 ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿಧಿಯಿಂದ ಉರ್ದು ಸೇರಿದಂತೆ ದ್ವಿಭಾಷಾ ಶಿಕ್ಷಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಕಟ್ಟಡಗಳ ನಿರ್ಮಾಣದ ನಂತರ ಶಿಕ್ಷಣ ಇಲಾಖೆಯಿಂದಲೇ ಸದರಿ ಶಾಲೆಗಳನ್ನು ನಿರ್ವಹಿಸಲಾಗುವುದು. ಇದರೊಂದಿಗೆ 750ಕೋಟಿ ರಾಜ್ಯ ಸರ್ಕಾರದ ಪೂರಕ ನಿಧಿ ಮತ್ತು ಎಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿನ ಆರ್ಥಿಕ ನೆರವು ಸೇರಿದಂತೆ 1750ಕೋಟಿ ವೆಚ್ಚದಲ್ಲಿ ಮುಂದಿನ 4ವರ್ಷಗಳ ಅವಧಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ಆರಂಭಿಸಲಾಗುವುದು ಎಂದ ಅವರು, ಕೊಡುಗೈ ದಾನಿಗಳಿಗೆ ಈ ಕಾರ್ಯಕ್ರಮ ಸ್ಫೂರ್ತಿ ನೀಡಲಿದೆ ಎಂದರು.
ದೇವಸ್ತಾನಕ್ಕಿಂತ ಶಾಲೆ ದೊಡ್ಡದಾಗಿದ್ದಾಗಿ ಪ್ರತಿಫಲ ನಿರೀಕ್ಷಿಸಬಹುದಾಗಿದೆ. ಪ್ರಸ್ತುತ ಸೈನ್ಸ್ ಶಾಲಾ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎಜಕ್ಸ್ ಕರ್ನಾಟಕ ಪಬ್ಲಿಕ್ ಸ್ಕೂಲ್ಕಟ್ಟಡ ನಿರ್ಮಾಣಕ್ಕೆ ಎಜಕ್ಸ್ ಸಂಸ್ಥೆಯ ಮುಖ್ಯಸ್ಥರಾದ ಕೆ. ವಿಜಯ ಮತ್ತು ಶ್ರೀಮತಿ ಕಲ್ಯಾಣಿ ವಿಜಯ್‌ಅವರು ತಮ್ಮ ಟ್ರಸ್ಟ್ ವತಿಯಿಂದ 13.05ಕೋಟಿ ರೂ.ಗಳ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡವನ್ನು ಒಂದು ವರ್ಷದ ಅವಧಿಯೊಳಗಾಗಿ ನಿರ್ಮಿಸಿ ಇಲಾಖೆಗೆ ಹಸ್ತಾಂತರಿಸಲಿದ್ದಾರೆ. ಅದಕ್ಕಾಗಿ ಸಹೃದಯಿ ಕೆ. ವಿಜಯ ದಂಪತಿಗಳಿಗೆ ಸರ್ಕಾರದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು. ಶಾಸಕ ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‌ಸಿ ಡಿ.ಎಸ್. ಅರುಣ್, ಬಲ್ಕಿಶ್‌ಭಾನು, ಎಜಕ್ಸ್ ಸಂಸ್ಥೆಯ ಪ್ರಮುಖರು, ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಹಲವರಿದ್ದರು.


