ಶಿವಮೊಗ್ಗ: ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆ ಹಾಗೂ ಮೊಬೈಲ್ ಅಡಿಕ್ಷನ್ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ಅಡಿಕ್ಷನ್’ ಎಂಬ ಕನ್ನಡ ಮಕ್ಕಳ ಚಲನಚಿತ್ರ ನಿರಮೀಸಲಾಗಿದ್ದು, ಸೆ. 7 ರಿಂದ ಜಿಲ್ಲೆಯ ಶಾಲೆಗಳಲ್ಲಿ ಚಿತ್ರ ಪ್ರದರ್ಶನಗೊಳಿಸಲು ಸಿದ್ಧತೆ ನಡೆದಿದೆ ಎಂದು ನಿರ್ದೇಶಕ ಅಜಯ್ ಕುಮಾರ್ ಎ.ಜೆ. ತಿಳಿಸಿದರು.
ಶುಕ್ರವಾರ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮಕ್ಕಳಿಗೆ ಮೊಬೈಲ್ ಬಳಕೆ ಅನಿವಾರ್ಯವಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ, ಅದರ ಅತಿಯಾದ ಬಳಕೆಯಿಂದ ಶಿಕ್ಷಣ, ಏಕಾಗ್ರತೆ, ಮಾನಸಿಕ ಬೆಳವಣಿಗೆ ಹಾಗೂ ಭವಿಷ್ಯದ ಗುರಿಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಚಿತ್ರದಲ್ಲಿ ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಡಲಾಗಿದೆ ಎಂದರು.
‘ಅಡಿಕ್ಷನ್’ ಚಿತ್ರದ ಕಥೆಯನ್ನು ಕರ್ನಾಟಕದ ಶಿವಮೊಗ್ಗ, ಬೆಂಗಳೂರು ಹಾಗೂ ಕೇರಳದ ಆಲಪ್ಪಿ ಜಿಲ್ಲೆಗಳಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ರಚಿಸಲಾಗಿದೆ. ಮೊಬೈಲ್ ಚಟಕ್ಕೆ ಒಳಗಾದ ಮಕ್ಕಳು ಎದುರಿಸುವ ಸಮಸ್ಯೆಗಳು, ಅವರ ಜೀವನದಲ್ಲಿ ಉಂಟಾಗುವ ಬದಲಾವಣೆಗಳು ಹಾಗೂ ಚಟದಿಂದ ಹೊರಬಂದು ಶಿಕ್ಷಣದ ಕಡೆಗೆ ಗಮನ ಹರಿಸಿ ಗುರಿ ಸಾಧಿಸುವ ಪ್ರಯತ್ನವನ್ನು ಚಿತ್ರ ಪರಿಣಾಮಕಾರಿಯಾಗಿ ತೋರಿಸುತ್ತದೆ ಎಂದರು.
ಎಸ್ಬಿವಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಬೃಂದಾ ಜಯರಾಮ್ ಚಿತ್ರವನ್ನು ನಿರ್ಮಿಸಿದ್ದಾರೆ. ಅಜಯ್ ಕುಮಾರ್ ಎ.ಜೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಹಾಗೂ ದಿನೇಶ್ ಕುಮಾರ್ ಸಂಗೀತ ನೀಡಿದ್ದಾರೆ ಎಂದ ಅವರು, ಅಕ್ಟೋಬರ್ ತಿಂಗಳಲ್ಲಿ ಚಿತ್ರವನ್ನು ರಾಜ್ಯಾದಾದ್ಯಂತ ಬಿಡುಗಡೆ ಮಾಡಲಾಗುವುದು ಎಂದರು. ಪ್ರಮುಖರಾದ ಪ್ರಕಾಶ್, ಡಾ.ತಾನಾಜಿ, ಗಿರೀಶ್, ಲಕ್ಷ್ಮೀಶ್, ಪ್ರಕಾಶ್ ಇದ್ದರು.


