ಶಿವಮೊಗ್ಗ: ಲಕ್ಷಾಂತರ ಕಲಾವಿದರು ಮತ್ತು ತಂತ್ರಜ್ಞರಿಗೆ ಉದ್ಯೋಗ ನೀಡಿದ ಚಿತ್ರರಂಗವನ್ನು ಕಡೆಗಣಿಸಬೇಡಿ. ಸಿನಿಮಾ ಒಂದು ಸಂಸ್ಕೃತಿಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಹೇಳಿದ್ದಾರೆ.
ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ನಡೆಯುತ್ತಿರುವ ವಿಜೃಂಭಣೆಯ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ ಇಂದು ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಚಲನಚಿತ್ರ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಪ್ರಸಿದ್ಧ ಮೈಸೂರು ದಸರಾದಲ್ಲಿ 1936 ರಿಂದ ನಡೆದುಕೊಂಡು ಬಂದ ಚಲನಚಿತ್ರೋತ್ಸವವನ್ನು ಈ ಬಾರಿ ದುಡ್ಡಿಲ್ಲ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಮೇರೆಗೆ ಕೈಬಿಟ್ಟಿರುವುದು ದುರಂತದ ಸಂಗತಿ. ವಿದೇಶದಲ್ಲಿ ಕಾಮ್ಸ್ ಫೆಸ್ಟಿವಲ್ ಮುನ್ನ ಹಲವು ದೇಶಗಳ ತಂತ್ರಜ್ಞರು 6 ತಿಂಗಳ ಮುನ್ನವೇ ತಯಾರಿ ನಡೆಸುತ್ತಾರೆ. ಆ ಮೂಲಕ ಚಿತ್ರರಂಗವನ್ನು ಬೆಳೆಸಿ ಸಮಾಜಕ್ಕೆ ಸಂದೇಶ, ಕೊಡುಗೆ ನೀಡಿದ್ದಾರೆ ಎಂದರು.
ನಾನು ಮೈಸೂರಿನಲ್ಲಿ ಫಿಲಂ ಸಿಟಿ ನಿರ್ಮಾಣಕ್ಕೆ ಕಳೆದ 14 ವರ್ಷಗಳಿಂದ ಫೈಲ್ ಹಿಡಿದು ರಾಜಕಾರಣಿಗಳ ಬಳಿಗೆ ಓಡಾಡುತ್ತಿದ್ದೇನೆ. ಹಿಂದೆ 36 ಗಂಟೆಗಳ ಸಿನಿಮಾ ಮಾಡುತ್ತಿದ್ದರು. ಆದರೂ ಜನ ಇನ್ನೆರಡು ಗೀತೆ ಇರಬೇಕೆಂದು ಹೇಳುತ್ತಿದ್ದರು. ಈಗ 90 ನಿಮಿಷಕ್ಕೆ ಸೀಮಿತವಾಗಿದೆ. ಮೈಸೂರಿಗೆ ಸವಾಲು ಎಂಬಂತೆ ಶಿವಮೊಗ್ಗದಲ್ಲಿ ದಸರಾ ನಡೆಸುತ್ತಿದ್ದಾರೆ. ಇಲ್ಲಿ ಕಲೆ ಮತ್ತು ಕಲಾದೇವಿಯೇ ನೆಲೆಸಿದ್ದಾಳೆ.
ಕಿರುತೆರೆ ನಟಿ ಸಂಗೀತ ಅನಿಲ್ ಕೂಡ ಶಿವಮೊಗ್ಗ ಚಲನಚಿತ್ರ ದಸರಾವನ್ನು ಕೊಂಡಾಡಿದರು. ಮಾಸ್ಟರ್ ಮಂಜುನಾಥ್, ಮಾಸ್ಟರ್ ರೋಹಿತ್ ಶ್ರೀನಾಥ್ ಮಾಲ್ಗುಡಿ ಡೇಸ್ ನ ತಮ್ಮ ಶಿವಮೊಗ್ಗದ ಚಿತ್ರೀಕರಣದ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್. ಚನ್ನಬಸಪ್ಪ, ಡಿಎಸ್ ಅರುಣ್ ಮಾತನಾಡಿದರು. ಕರ್ನಾಟಕ ಚಲನಚಿತ್ರ ಅಕಾಡಮಿ ಸದಸ್ಯ ದೇಶಾದ್ರಿ ಹೊಸ್ಮನೆ, ಸೂಡಾ ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ತುಕಾರಾಂ ರಾವ್ ಬಿ.ವಿ., ಪ್ರಭಾಕರ್, ವೈದ್ಯ, ಯಶವಂತ್ ಸೇರಿದಂತೆ ಹಲವರಿದ್ದರು.


