<div class="dreamweb-ad dreamweb-banner-ad"><img src="https://shimogatoday.com/wp-content/uploads/2026/10/krishi.jpg" alt="Banner Ad" /></div>ದಸರಾ ಮೆರವಣಿಗೆಯಲ್ಲಿ ಅನಾಹುತ: ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ

Banner Ad
ದಸರಾ ಮೆರವಣಿಗೆಯಲ್ಲಿ ಅನಾಹುತ: ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ

ಶಿವಮೊಗ್ಗ :- ನಗರದಲ್ಲಿ ನಿನ್ನೆ ನಡೆದ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತ ಸಕ್ರೆಬೈಲ್ ಸೋಮಣ್ಣ ಆನೆ ಅಂಬಾರಿ ಸಹಿತವಾಗಿ ಮೆರವಣಿಗೆಯಲ್ಲಿ ದಿಕ್ಕಾಪಾಲಾಗಿ ಓಡಿದ ಪರಿಣಾಮ ಸಾರ್ವಜನಿಕರಲ್ಲಿ ಆತಂಕ ಉಂಟಾಗಿತ್ತು. ಮತ್ತು ಆದ ಅನಾಹುತದ ಪರಿಣಾಮ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮತ್ತು ವಿವಿಧ ಸಂಘಟನೆಗಳ ಮುಖಂಡರು ಕೋಟೆ ದೇವಸ್ಥಾನ ಆಂಜನೇಯಸ್ವಾಮಿ ದೇವಾಲಯದ ಅರ್ಚಕರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ನಿನ್ನೆಯ ಅನಾಹುತಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಗಣ್ಯರು ಅನೇಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರಿಂದ ಲೋಪವಾಗಿದೆ ಎಂದು ಈ ಹಂತದಲ್ಲಿ ಹೇಳಲಾಗುವುದಿಲ್ಲ. ಚಾಮುಂಡಿ ವಿಗ್ರಹ ಕೆಳಗೆ ಬಿದ್ದು ಭಿನ್ನಗೊಂಡಿದ್ದಕ್ಕೆ ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಕೆಲವೊಂದು ಪೂಜ ವಿಧಿ ವಿಧಾನಗಳನ್ನು ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನು ನಾನು ಮೇಲಾಧಿಕಾರಿಗಳೊಂದಿಗೆ ಚರ್ಚಿಸಬೇಕಾಗಿದೆ. ಮತ್ತು ಸರ್ಕಾರದ ಧಾರ್ಮಿಕ ಪರಿಷತ್ ಅಧಿಕಾರಿಗಳೊಂದಿಗೆ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತಂದು ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ಮತ್ತು ಕೆಲವು ಸಂಘಟನೆಗಳು ಆನೆ ಬಿಡಾರದ ಲೋಪ ದೋಷಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಹಾಗೂ ಹಿಂದೆ ಅಂಬಾರಿ ಹೊತ್ತ ಸಾಗರ್ ಆನೆಯನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿದ್ದು, ಮತ್ತೆ ನಿನ್ನೆ ಅಂಬಾರಿ ಹೊತ್ತ ಸೋಮಣ್ಣ ಆನೆಗೆ ತಾಲೀಮು ಕೊರತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ನಾನು ಈಗಾಗಲೇ ಸಿಸಿಎಫ್ ಅವರಿಗೆ ಈ ಬಗ್ಗೆ ತನಿಖೆ ನಡೆಸಲು ಕೋರಿದ್ದೇನೆ. ಮುಂದೆ ಈ ರೀತಿಯ ಘಟನೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಸಭೆಯಲ್ಲಿ ಚರ್ಚೆಯಾಗಿದೆ. ಯಾರದೇ ಲೋಪ ಕಂಡು ಬಂದರೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣಗೌಡ ಮತ್ತಿತರ ಅಧಿಕಾರಿಗಳು ಇದ್ದರು.

Spread the love

Comments

No comments yet. Why don’t you start the discussion?

Leave a Reply

Your email address will not be published. Required fields are marked *