ಸೊರಬ :- ನೇರ, ನಿಷ್ಟುರ ಆಡಳಿತದ ಮೂಲಕ ಜನಮಾನಸದಲ್ಲಿ ಉಳಿದಿರುವ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಅವರು ಸಮಾಜದ ಎಲ್ಲ ವರ್ಗದ ಜನರ ಹಿತಕಾಯಲು ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪವಾಗಿ ಕಂಡು ಬಂದ ಮಹಾನ್ ನಾಯಕರಾಗಿದ್ದರು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಬಣ್ಣಿಸಿದರು.
ಪಟ್ಟಣದ ಬಂಗಾರ ಧಾಮದಲ್ಲಿ ಬಂಗಾರಪ್ಪ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಅವರ 94 ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಬಡವರ ಪರ ಸದಾ ಚಿಂತಿಸುತ್ತಿದ್ದ ಬಂಗಾರಪ್ಪನವರು ಸಮ ಸಮಾಜದ ಕನಸು ಹೊತ್ತು ಪ್ರತಿಪಾದಿಸಿದ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಬಡ ಜನರ ಕಲ್ಯಾಣಕ್ಕಾಗಿ ಅಕ್ಷಯ,ವಿಶ್ವ, ಆರಾಧಾನಾ, ಆಶ್ರಯ ಯೋಜನೆಗಳನ್ನು ಅನುಷ್ಠಾನ ಮಾಡಿದರು. ಬಂಗಾರಪ್ಪ ಅವರು ಬಡವರ ಪರವಾದ ನಿಲುವುಗಳನ್ನು ಅಭಿವ್ಯಕ್ತಿಸಲು
ಆಕ್ರೋಶವಾಗಿ ಪ್ರತಿಪಾದನೆ ಮಾಡಿದರೆ, ಮಧು ಬಂಗಾರಪ್ಪ ಅವರು ಸೌಮ್ಯವಾಗಿ ಮಾತನಾಡುತ್ತಾರೆ. ತಮ್ಮ ತಂದೆಯಂತೆಯೆ ಉತ್ತಮ ವ್ಯಕ್ತಿತ್ವ ಹೊಂದಿರುವ ಮಧು ಭವಿಷ್ಯದ ನಾಯಕನಾಗಿ ಬೆಳೆಯಬಲ್ಲರು ಎಂದು ಭವಿಷ್ಯ ನುಡಿದರು.
ಸಣ್ಣ ನೀರಾವರಿ ಸಚಿವ ಡಾ.ಅಜಯ್ ಧರ್ಮಸಿಂಗ್ ಮಾತನಾಡಿ, ಬಂಗಾರಪ್ಪ ನವರು ರಾಷ್ಟ್ರ ರಾಜ್ಯ ಕಾರಣದ ಐಕಾನ್ ಆಗಿದ್ದರು. ತಮ್ಮ ಜೀವನದುದ್ದಕ್ಕೂ ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ನಮ್ಮ ತಂದೆ ಮಾಜಿ ಮುಖ್ಯ ಮಂತ್ರಿ ಧರ್ಮಸಿಂಗ್ ಮತ್ತು ಬಂಗಾರಪ್ಪ ಅವರ ಮಧ್ಯೆ ಆತ್ಮೀಯ ಸ್ನೇಹವಿತ್ತು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿ,
ನಮ್ಮ ತಂದೆ ಹಾಗೂ ಮಾಜಿ ಮುಖ್ಯ ಮಂತ್ರಿ ಎಸ್. ಬಂಗಾರಪ್ಪ ಅವರು ಧರಿಸುತ್ತಿದ್ದ ಕಪ್ಪು ಕನ್ನಡಕದ ಹಿಂದೆ ಬಡವರ ಉದ್ಧಾರದ ಕನಸು ಇತ್ತು. ಸಾರ್ವಜನಿಕ ಜೀವನದಲ್ಲಿ ನಿರಾಶ್ರಿತರ ಬದುಕು ನನಸಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಅವರ ಜನಪರ ಯೋಜನೆಗಳೇ ನಮಗೆ ಸ್ಫೂರ್ತಿ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪ್ರೊ. ಜಯದೇವ, ನಟರಾಜ್ ಹುಳಿಯಾರ್, ಶೇಖ್ ಮಾಸ್ತರ್, ರಮೇಶ್ ಅವರಿಗೆ ಬಂಗಾರಪ್ಪ ಅವರ ಹೆಸರಿನ ಪ್ರಶಸ್ತಿ ಹಾಗೂ ತಲಾ 1ಲಕ್ಷ ನಗದು ನೀಡಿ ಗೌರವಿಸಲಾಯಿತು.
ಬಂಗಾರಪ್ಪ ವಿಚಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್, ನಾಗರಾಜ ಮೂರ್ತಿ, ವಿಧಾನ ಪರಿಷತ್ ಸದಸ್ಯ ಬಲ್ಕಿಷ್ ಬಾನು, ಮಾಜಿ ಶಾಸಕ ಮಹೀಮ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಯೋಗೇಶ್ ಸೇರಿದಂತೆ ಹಲವರಿದ್ದರು.


