ಶಿವಮೊಗ್ಗ :- ಬಾಕ್ಸಿಂಗ್ ಕ್ರೀಡೆ ಅಂತರಾಷ್ಟ್ರೀಯ ಪ್ರಾಮುಖ್ಯತೆ ಪಡೆದ ಕ್ರೀಡೆಯಾಗಿದ್ದು, ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಬಾಕ್ಸಿಂಗ್ ಪಂದ್ಯಾವಳಿ ನಡೆಯುತ್ತಿರುವುದು ಹರ್ಷದಾಯಕ ವಿಚಾರವಾಗಿದ್ದು, ಕ್ರೀಡಾಪಟುಗಳು ಇದರಲ್ಲಿ ಭಾಗವಹಿಸಿ ಹೆಚ್ಚಿನ ಸಾಧನೆ ಮಾಡಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿತರಲಿ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶುಭ ಹಾರೈಸಿದ್ದಾರೆ.

ಅವರು ಇಂದು ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ರಾಜ್ಯ ಬಾಕ್ಸಿಂಗ್ ಅಮೇಚೂರ್ ಅಸೋಸಿಯೇಷನ್ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಯೂತ್ ಮತ್ತು ಜ್ಯೂನಿಯರ್ ಬಾಕ್ಸಿಂಗ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ, ಬಾಕ್ಸಿಂಗ್ ಜೊತೆಗೆ ವಿದ್ಯೆಯನ್ನು ಮರೆಯಬೇಡಿ. ಬಾಕ್ಸಿಂಗ್‌ನಲ್ಲಿ ಎಕ್ಸ್‌ಪರ್ಟ್ ಆದಲ್ಲಿ ಉತ್ತಮ ಭವಿಷ್ಯವಿದೆ. ಅದರ ಜೊತೆಗೆ ವಿದ್ಯೆಗೂ ಮಹತ್ವ ನೀಡಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಲಂಪಿಕ್‌ನಲ್ಲಿ ಬಾಕ್ಸಿಂಗ್‌ಗೆ ಅಗ್ರಸ್ಥಾನವಿದೆ. ಭಾಗವಹಿಸಿದ ಎಲ್ಲರಿಗೂ ಯಶಸ್ಸು ಸಿಗಲಿ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಅವಕಾಶ ಸಿಗಲಿ ಎಂದು ಹಾರೈಸಿದರು.
ರಾಜ್ಯ ಅಮೇಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ಸಂಜಯ್‌ಗೌಡ ಮಾತನಾಡಿ, ಭಾರತಕ್ಕೆ ಒಲಂಪಿಕ್‌ನಲ್ಲಿ ಅತೀ ಹೆಚ್ಚು ಪದಕ ಲಬಿಸಿದ್ದು ಬಾಕ್ಸಿಂಗ್‌ನಲ್ಲೇ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಾಕ್ಸಿಂಗ್‌ಗೆ ಹೆಚ್ಚಿನ ಅನುದಾನ ನೀಡುತ್ತಿದೆ. ರಾಜ್ಯ ಬಾಕ್ಸಿಂಗ್ ಅಸೋಸಿಯೇಷನ್ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ವಿನೋದ್ ನೇತೃತ್ವದಲ್ಲಿ ಜಿಲ್ಲಾ ಬಾಕ್ಸಿಂಗ್ ಅಸೋಸಿಯೇಷನ್ ಕೂಡ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸಿ, ಬಾಕ್ಸಿಂಗ್ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದೆ. ಸಾಧನೆ ಮಾಡಿದ ಬಾಕ್ಸಿಂಗ್ ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದ್ದು ಸರ್ಕಾರಿ ಉದ್ಯೋಗ ಜೊತೆಗೆ ನಿವೇಶಗಳನ್ನು ಕೂಡ ಸರ್ಕಾರ ನೀಡುತ್ತಿದೆ. ಭಾಗವಹಿಸಿದ ಎಲ್ಲರೂ ಗೆಲ್ಲಲ್ಲು ಆಗುವುದಿಲ್ಲ. ಆದರೆ ಭಾಗವಹಿಸುವುದೇ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್ ಮಾತನಾಡಿ, ಬಾಕ್ಸಿಂಗ್ ಕ್ರೀಡೆ ಮನುಷ್ಯನನ್ನು ಕ್ರೀಯಾಶೀಲನನ್ನಾಗಿ ಮಾಡುತ್ತದೆ. ನಮ್ಮ ತಂದೆಯವರೂ ಸೇರಿದಂತೆ ವೇದಿಕೆಯಲ್ಲಿರುವ ಮೂರುಜನ ಹಿರಿಯರು ೭೫ ವರ್ಷ ದಾಟಿದ್ದು ಅವರ ಕ್ರೀಡಾಸಕ್ತಿಯೇ ಅವರನ್ನು ಆರೋಗ್ಯವಂತರನ್ನಾಗಿ ಮಾಡಿದೆ. ಬಾಕ್ಸಿಂಗ್ ಕೆಚ್ಚೆದೆಯ ಕ್ರೀಡೆಯಾಗಿದ್ದು, ಇದರಲ್ಲಿ ಭಾಗವಹಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಆಯ್ಕೆಯಾದ ಎಂ.ಪಿ. ಸಂಭ್ರಮಾ ಇವರಿಗೆ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಈ. ವಿಶ್ವಾಸ್, ರಂಗನಾಥ್, ಸಾಯಿಸತೀಶ್, ಚಂದ್ರಶೇಖರ್, ದೇವರಾಜ್ ನಾಯ್ಕ, ವೇಣುಗೋಪಾಲ್, ಹನುಮಂತಪ್ಪ ಹಾಗೂ ಕ್ರೀಡಾಕೂಟದ ಆಯೋಜಕರಾದ ವಿನೋದ್ ಇದ್ದರು.



