ಶಿವಮೊಗ್ಗ :- ಉಪವಾಸ, ದಾನ ಧರ್ಮದ ಮಹತ್ವ ಸಾರುವ ರಂಜನ್ ಹಬ್ಬವನ್ನು ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಸಂಭ್ರಮ, ಸಡಗರದಿಂದ ಆಚರಿಸಿದರು.

ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಅವರು ನಂತರ ಒಬ್ಬರನ್ನೊಬ್ಬರು ಆಲಂಗಿಸಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಹೊಸ ಉಡುಪು ತೊಟ್ಟ ಮುಸ್ಲಿಂ ಬಾಂಧವರು ಮತ್ತು ಮಕ್ಕಳು ಕೂಡಾ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರಿಂದ ಜಗ ಸಾಕಾಗದೇ ರಸ್ತೆಯ ಮೇಲೂ ಕೂಡಾ ಪ್ರಾರ್ಥನೆ ಸಲ್ಲಿಸಿದರು.
ಶಿವಮೊಗ್ಗದ ಈದ್ಗಾ ಮೈದಾನ ಸೇರಿದಂತೆ ವಿವಿಧ ಮಸೀದಿ ಮತ್ತು ಇತರ ಸುಮಾರು 30ಕ್ಕೂ ಹೆಚ್ಚು ಕಡೆ ಮುಸ್ಲಿಂ ಬಾಂಧವರ ಇದ್ದು, ಪ್ರಾರ್ಥನೆ ಸಲ್ಲಿಸಿದರು. ಎಲ್ಲಾ ಕಡೆ ಮುಸ್ಲಿಂ ಮುಖಂಡರು ಮತ್ತು ಮೌಲಾನಾ ಅವರುಗಳು ಭಾಗವಹಿಸಿದ್ದರು.



