
ಶಿವಮೊಗ್ಗ : ಮಾಧ್ಯಮ ತನ್ನ ಸ್ವರೂಪ ಬದಲಾಯಿಸಿಕೊಂಡಿದ್ದು ಮೂಲ ಸ್ವರೂಪದಿಂದ ವಿಮುಖವಾಗಿದೆ. ಪತ್ರಕರ್ತ ಅಪ್‌ಡೇಟ್ ಆಗದಿದ್ದರೆ ವೃತ್ತಿಯಿಂದಲೇ ಔಟ್‌ಡೇಟ್ ಆಗುವ ಪರಿಸ್ಥಿತಿ ಇದ್ದು ಮುದ್ರಣ ಮಾಧ್ಯಮ ಸಾಮಾಜಿಕ ಜಾಲತಾಣದ ಸವಾಲಿನ ಎದುರು ಮಾಯವಾಗುವ ಆತಂಕದಲ್ಲಿದೆ ಎಂದು ಕರ್ನಾಟಕ ಮಾಹಿತಿ ಆಯೋಗ ಕಲ್ಬುರ್ಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಬಿ.ವೆಂಕಟಸಿಂಗ್ ಹೇಳಿದ್ದಾರೆ.
ಅವರು ಇಂದು ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪಿ. ಲಂಕೇಶ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾಡಿನ ಅತ್ಯಂತ ಕ್ರೀಯಾಶೀಲ ಪತ್ರಕರ್ತರಾಗಿ ರಾಜ್ಯ ರಾಜಕಾರಣದಲ್ಲೇ ತಮ್ಮ ಪತ್ರಿಕೋದ್ಯಮದಿಂದ ಸಂಚಲನ ಮೂಡಿಸಿದ ಪಿ. ಲಂಕೇಶ್ ಹೆಸರಿನಲ್ಲಿ ನೀಡುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸುವುದೇ ನನ್ನ ಪಾಲಿನ ಸುಯೋಗ ಅದರಲ್ಲೂ ಅಂಬೇಡ್ಕರ್ ಜಯಂತಿಯಂದು ಅವರ ಆಶಯಕ್ಕೆ ಪೂರಕವಾದ ಗಾಂಧೀಜಿ ಮತ್ತು ಅಂಬೇಡ್ಕರ್ ಸಿದ್ಧಾಂತದೊಂದಿಗೆ ಪಿ. ಲಂಕೇಶ್ ಅವರ ಪತ್ರಿಕೋದ್ಯಮವನ್ನು ಅನುಸರಿಸಿದ ಸರಳ ಸಜ್ಜನಿಕೆಯ ಹಿರಿಯ ಪತ್ರಕರ್ತರಾದ ಡಿ. ಮಹಾದೇವಪ್ಪನವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಸಂತೋಷದ ವಿಚಾರವೆಂದರು.

ಚಿಂತಕ ಪ್ರೊ.ರಾಜೇಂದ್ರಚೆನ್ನಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಪ್ರಜಪ್ರಭುತ್ವದ ಮಲ್ಯಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬಂದಾಗ ಮಾತ್ರ ಪ್ರಜಪ್ರಭುತ್ವ ಇದೆ ಎಂದು ಅನಿಸುತ್ತದೆ. ಪತ್ರಿಕೋದ್ಯಮಕ್ಕೆ ಪ್ರಜಪ್ರಭುತ್ವದ ಜೊತೆಗೆ ಜನಸಾಮಾನ್ಯನನ್ನು ಬೆಸೆಯುವ ಶಕ್ತಿಯಿದೆ ಎಂದರು.
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಿಂಚು ಶ್ರೀನಿವಾಸ್ ಪ್ರಶಸ್ತಿಯನ್ನು ಪತ್ರಿಕೋದ್ಯಮದ ಅತಿರಥ ಮಹಾರಥರನ್ನು ಗುರುತಿಸಿ ನೀಡುತ್ತಿದ್ದೇವೆ. ರಾಜ್ಯಮಟ್ಟದಲ್ಲಿ ಹೊಸ ಆಯಾಮ ಸೃಷ್ಟಿ ಮಾಡುವ ದೆಸೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ಹಿರಿಯ ಪತ್ರಕರ್ತ ಡಿ.ಮಹಾದೇವಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಪದಾಧಿಕಾರಿಗಳು ಹಾಜರಿದ್ದರು.



