
ಶಿವಮೊಗ್ಗ :- ನಗರದಲ್ಲಿ ಉದ್ಭವವಾಗಿರುವ ಕಲುಷಿತ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಇನ್ನೊಂದು ವಾರದಲ್ಲಿ ಇತ್ಯರ್ಥ ಕಂಡುಕೊಳ್ಳಲಾಗುವುದು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಇತ್ತೀಚಿನ ಮಳೆಯಿಂದಾಗಿ ಕಲುಷಿತ ನೀರು ಸರಬರಾಜಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ದೂರು ಕೇಳಿಬರುತ್ತಿದೆ. ಈ ಕುರಿತು ಈಗಾಗಲೇ ಜಲಮಂಡಳಿಯವರ ಜೊತೆ ಚರ್ಚಿಸಲಾಗಿದೆ. ಎರಡನೇ ಹಂತದ ನೀರು ಸರಬರಾಜಿಗೆ ಜಲಸಂಗ್ರಹಗಾರಕ್ಕೆ ಭೂಮಿಯನ್ನು ಗುರುತಿಸಲಾಗಿದೆ. ಶೆಟ್ಟಿಹಳ್ಳಿ ಅಭಯಾರಣ್ಯದ ಕಂದಾಯ ಜಗವನ್ನು ಗುರುತಿಸಲಾಗಿದೆ. ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಸೆಲ್ವಮಣಿ ಅವರ ಜೊತೆ ಚರ್ಚಿಸಲಾಗಿದ್ದು, ಈ ಕುರಿತು ಪ್ರಸ್ತಾವನೆಯನ್ನು ಕಳುಹಿಸಿ ಕೊಡುವಂತೆ ಕೋರಿದ್ದಾರೆ ಎಂದರು.

ಶಿವಮೊಗ್ಗ ನಗರಕ್ಕೆ ಎರಡು ಟಿಎಂಸಿ ನೀರು ಬೇಕಾಗಿದ್ದು, ಈ ಕುರಿತು ನೀರಾವರಿ ಇಲಾಖೆ ಅನುಮತಿ ಪಡೆಯಲಾಗಿದೆ. ಅಭಿವೃದ್ಧಿ ಹೊಂದಿದ ತಂತ್ರಜನವನ್ನು ಅಳವಡಿಸಿಕೊಂಡು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು. ಹಾಲಿ ಇರುವ ನೀರು ಸಂಸ್ಕರಣಾ ಕೇಂದ್ರದಲ್ಲಿ ಫಿಲ್ಟರ್ ಬೆಡ್‌ಗಳು ಹಾಳಾಗಿದ್ದು ಟೆಂಡರ್ ಕರೆಯಲಾಗಿದೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದ್ದಾರೆ.


