
ಶಿವಮೊಗ್ಗ :- ಪಶ್ಚಿಮ ಘಟ್ಟದ ಅತೀಸೂಕ್ಷ್ಮ ಪ್ರದೇಶವಾದ ಶರಾವತಿ ಕಣಿವೆಯಲ್ಲಿ ಯಾವುದೇ ಪರಿಸರ ಮಾರಕ ಯೋಜನೆಗಳನ್ನು ಜರಿಗೊಳಿಸದೆ ಅನುಮತಿ ನೀಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದರು.

ಅವರು ಇಂದು ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಹಾಗೂ ವಿವಿಧ ಪರಿಸರ ಹೋರಾಟ ಸಂಘಟನೆಗಳ ಸಹಯೋಗದೊಂದಿಗೆ ಪ್ರಸ್ತಾವಿತ ಸುಮಾರು 10,500 ಕೋಟಿ ರೂಪಾಯಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಆಯೋಜಿಸಿದ್ದ ಬೃಹತ್ ಸೈಕಲ್, ಮೋಟಾರ್ ಬೈಕ್, ಕಾರುಗಳ ಪ್ರತಿಭಟನಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಒಂದು ಜನವಿರೋಧಿ ಯೋಜನೆಯ ವಿರುದ್ಧ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನಾ ರ್‍ಯಾಲಿ ಆಗಿದ್ದು ಇಂದೇ ಎಂದ ಅವರು ನಾಗರೀಕರಿಗೆ ಯಾವುದೇ ತೊಂದರೆ ಆಗದ ಹಾಗೆ ಈ ರ್‍ಯಾಲಿ ನಡೆದಿದೆ. ರಾಜ್ಯ ಸರ್ಕಾರ ಈ ಮಾರಕ ಯೋಜನೆಗೆ ಶತಾಯ-ಗತಾಯ ಮುಂದಾಗಿದೆ. ಈ ಯೋಜನೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿಯಾಗಲಿದೆ. ಈ ಭಾಗದ ಜನ-ಜನುವಾರು, ಪ್ರಾಣಿ-ಪಕ್ಷಿಗಳಿಗೆ ಜೀವನವೇ ದುಸ್ತರವಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಜರಿಯಾಗ ಕೂಡದು ಒಂದು ವೇಳೆ ಈ ಯೋಜನೆ ಜರಿಯಾದರೆ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಇಂಧನ ಸಚಿವರಿಗೆ ಮುತ್ತಿಗೆಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಮುಂದಿನ ಉಗ್ರ ಹೋರಾಟದ ರೂಪು-ರೇಷೆ ಚರ್ಚಿಸಲು ಏಪ್ರಿಲ್ ೨೨ರಂದು ಪರಿಸರಾಸಕ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದರು.
ಪ್ರತಿಭಟನಾ ರ್‍ಯಾಲಿಯನ್ನು ಖ್ಯಾತ ನರರೋಗ ತಜ್ಞ ಡಾ. ಶಿವರಾಮಕೃಷ್ಣ ಉದ್ಘಾಟಿಸಿದರು. ಪರಿಸರ ಹೋರಾಟಗಾರ ಪ್ರೊ.ಬಿ.ಎಂ.ಕುಮಾರಸ್ವಾಮಿ, ಕೆ.ಈ. ಕಾಂತೇಶ್ ಮಾತನಾಡಿದರು. ಪ್ರಮುಖರಾದ ಡಾ.ಪಿ. ನಾರಾಯಣ, ಡಾ. ಶ್ರೀಪತಿ ಎಲ್.ಕೆ., ಡಾ. ಶೇಖರ್‌ಗೌಳೇರ್, ಶ್ರೀಕಾಂತ್, ವಿಶ್ವಾಸ್ ಸೇರಿದಂತೆ ಹಲವರಿದ್ದರು.



