
ಶಿವಮೊಗ್ಗ :- ತಾಳಗುಪ್ಪ-ಶಿರಸಿ-ಹುಬ್ಬಳ್ಳಿ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಸರ್ವೇಕಾರ್ಯ ನಡೆಯುತ್ತಿದ್ದು, ಆರ್ಥಿಕವಾಗಿ ಕಾರ್ಯಸಾಧುವಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಈ ಮಾರ್ಗ ಸೇವಾದೃಷ್ಟಿಯಿಂದ ಅಷ್ಟೊಂದು ಲಾಭದಾಯಕವಲ್ಲದಿದ್ದರೂ ಸರಕು ಸಾಗಾಣಿಕೆಗೆ ಅನುಕೂಲವಾಗುತ್ತದೆ. ಆರ್ಥಿಕವಾಗಿ ಕಾರ್ಯಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆಗೆ ಮನವರಿಕೆ ಮಾಡಿಕೊಟ್ಟು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಬೀರೂರು-ಶಿವಮೊಗ್ಗ ನಡುವೆ ರೈಲ್ವೆ ದ್ವಿಪಥ ನಿರ್ಮಾಣಕ್ಕೆ ಇನ್ನು ಅನುಮತಿ ಸಿಕ್ಕಿಲ್ಲ. ಬೀರೂರಿನಿಂದ ತಾಳಗುಪ್ಪವರೆಗೆ ಉಪ ಮಾರ್ಗವಷ್ಟೇ ಇದೆ ಎಂದ ಅವರು, ದ್ವಿಪಥ ನಿರ್ಮಾಣಕ್ಕೆ ದ್ವಿಪಥ ನಿರ್ಮಾಣದ ಅನುಮತಿಗೆ ರೈಲ್ವೆ ಸಚಿವರ ಜೊತೆ ಚರ್ಚಿಸುವುದಾಗಿ ಹೇಳಿದರು.
ಶಿವಮೊಗ್ಗ-ಭದ್ರಾವತಿ ನಡುವಿನ ಮಾಚೇನಹಳ್ಳಿಯಲ್ಲಿ ಹೆದ್ದಾರಿ ಕಾಮಗಾರಿ ವಿಳಂಬವಾಗುವುದಕ್ಕೆ ಕೆಲವು ತಾಂತ್ರಿಕ ಕಾರಣಗಳಿವೆ. ಮಲವಗೊಪ್ಪ ಜನರು ಭೂಮಿ ಬಿಟ್ಟುಕೊಡಲು ನಿರಾಕರಿಸಿದ್ದು ಇದಕ್ಕೆ ಕಾರಣವಾಗುತ್ತಿದೆ. ಮೊದಲನೇ ಹಂತದ ಟೆಂಡರ್ ಕಾಮಗಾರಿ ಮುಗಿದಿದ್ದು ಎರಡನೇ ಹಂತದ ಕಾಮಗಾರಿಯನ್ನು ಇಷ್ಟರಲ್ಲೇ ಆರಂಭಿಸಲಾಗುತ್ತದೆ. ಮಳೆಗಾಲ ಆರಂಭವಾಗುವುದರೊಳಗಾಗಿ ಈ ಸಮಸ್ಯೆಯನ್ನು ಬಗೆಹರಿಸಲಾಗುವುದು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ಅವರು ವಿನಂತಿಸಿದರು.


