ಶಿವಮೊಗ್ಗ :- ಧರ್ಮದ ರಕ್ಷಣೆಗಾಗಿ, ದುಷ್ಟರ ಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ಜನ್ಮ ತಾಳಿದವನೇ ವೀರಭದ್ರ ಎಂದು ಕಾಶಿ ಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ.
ಅವರು ಇಂದು ನಗರದ ಚೌಕಿಮಠ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭ ಹಾಗೂ ವೇದಿಕೆಯಿಂದ ಪ್ರಾರಂಭಿಸಿದ ೫ನೇ ವರ್ಷದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಪೂಜೆಯನ್ನು ನೆರವೇರಿಸಿ ಸಮಾರಂಭದ ದಿವ್ಯಸಾನಿಧ್ಯವಹಿಸಿ, ಆಶೀರ್ವಚನ ನೀಡಿದರು.
ವಿಶಾಲವಾದ ಚರಿತ್ರೆ ವೀರಭದ್ರನಿಗಿದೆ. ದಕ್ಷಬ್ರಹ್ಮ ಕೈಗೊಂಡ ಯಜ್ಞದಲ್ಲಿ ತನ್ನ ಅಳಿಯ ಶಿವನಿಗೆ ಆಹ್ವಾನ ನೀಡದೆ ಅಪಮಾನ ಮಾಡಿದಾಗ, ಶಿವನ ಕ್ರೋಧಕ್ಕೆ ತುತ್ತಾಗಿ ಆತನ ಜಟೆಯಿಂದ ಉದ್ಭವಿಸಿದವನೇ ವೀರಭದ್ರ. ಆತ ಜನ್ಮತಾಳಿದ ತಕ್ಷಣ, ದುರಂಹಕಾರಿ, ದಕ್ಷಬ್ರಹ್ಮನ ಸಂಹಾರ ಮಾಡುತ್ತಾನೆ. ಆ ವೀರಭದ್ರನೇ ಧರ್ಮದ ರಕ್ಷಣೆಗಾಗಿ ಮಾಡುತ್ತಾ ನಿರಂತರವಾಗಿ ಕಲಿಯುಗದಲ್ಲಿ ಪ್ರತ್ಯಕ್ಷ ದೇವರಾಗಿ ಪ್ರಕಟವಾಗಿದ್ದಾನೆ ಎಂದರು.
ಕಲಿಯುಗದಲ್ಲಿ ಕಾಣುವ ಪ್ರತ್ಯಕ್ಷ ದೇವರಾದ ವೆಂಕಟರಮಣ ಕೂಡ ವೀರಭದ್ರನ ಅವತಾರ ಎಂದು ಆಂಧ್ರ, ಮಹಾರಾಷ್ಟ್ರದ ಕಡೆ ಜನ ನಂಬಿದ್ದಾರೆ ಎಂದರು.ವೀರಶೈವ ಲಿಂಗಾಯತರು ಎರಡೂ ಒಂದೇ. ಈ ಬಗ್ಗೆ ಸಮಾಜದಲ್ಲಿ ಗೊಂದಲಬೇಡ ಎಂದರು.
ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ ಎಸ್.ಎಸ್. ಜ್ಯೋತಿ ಪ್ರಕಾಶ್ ಅವರು ಮಾತನಾಡಿ, ೧೦೦ ವರ್ಷಗಳ ಹಿಂದೆ ಹಾನಗಲ್ ಕುಮಾರ ಸ್ವಾಮೀಜಿಯವರು ಅಖಿಲ ಭಾರತ ವೀರಶೈವ ಮಹಾಸಭಾವನ್ನು ಸ್ಥಾಪಿಸಿದರು. ನಮ್ಮೆಲ್ಲರ ಒಳಿತಿಗಾಗಿ ಈ ಸಮಾಜಕ್ಕೆ ಮಾರ್ಗದರ್ಶನ ನೀಡಲು ಅವರು ಹುಟ್ಟುಹಾಕಿದ ಈ ಸಂಸ್ಥೆಯಲ್ಲಿ ಯಾವುದೇ ಗೊಂದಲಬೇಡ. ಇತ್ತೀಚೆಗೆ ಬಸವತತ್ವ, ಲಿಂಗಾಯತ ಎಂದು ಬೇರೆ ಬೇರೆ ಗೊಂದಲ ಮತ್ತು ಒಡಕು ಕೇಳಿಬರುತ್ತಿದೆ. ನಮ್ಮ ಮಕ್ಕಳು, ಮೊಮ್ಮಕ್ಕಳು ಸಮಾಜ ದಲ್ಲಿ ಸ್ಥಾನಮಾನ ಗಳಿಸಬೇಕಾದರೆ ನಾವೆಲ್ಲರೂ ಒಂದಾಗಿರಬೇಕು. ಜನಗಣತಿಗೆ ಬಂದಾಗ ನಾವೆಲ್ಲರೂ ಕೂಡ ವೀರಶೈವ ಲಿಂಗಾಯತ ಎಂದೇ ಬರೆಸಬೇಕು ಎಂದರು.
ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿ, ವಿಭಿನ್ನವಾದ ನಾಲ್ಕು ಗಂಟೆಗಳ ಸಂಗೀತಯುಕ್ತ ಇಷ್ಠಲಿಂಗ ಪೂಜೆ ನೆರವೇರಿಸಿ, ಗುರುಗಳು ಶಿವಮೊಗ್ಗದ ಭಕ್ತರನ್ನು ಕೃತಾರ್ಥ ರನ್ನಾಗಿ ಮಾಡಿದ್ದಾರೆ ಎಂದರು.
ತಾವರೆಕೆರೆಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಲಿಂಗಾಯತ ದ್ವಂದ್ವಬೇಡ, ಇವ ನಾರವ ಇವ ನಾರವ ಎಂಬ ಅರ್ಥ ಬರಬೇಕಾದರೆ ನಾವೆಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದರು.
ಮಳಲಿ ಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಪದ ಸೈದ್ಧಾಂತಿಕವಾಗಿ ಬಂದಿದ್ದು, ಲಿಂಗಾಯತ ಪದ ರೂಢಿಯಲ್ಲಿ ರುವುದು ಎರಡೂ ಒಂದೇ ಏಕಾಂತದಲ್ಲಿದ್ದ ಇಷ್ಠಲಿಂಗ ಪೂಜೆಯನ್ನು ಲೋಕಾಂತಕ್ಕೆ ತಂದವರು ರಂಭಾಪುರಿ ಮಠದ ವೀರಗಂಗಾಧರ ಭಗವತ್ಪಾದರು. ಇಂದು ಶ್ರೀ ಕಾಶಿ ಪೀಠದ ಶ್ರೀಗಳು ನಾಲ್ಕು ಗಂಟೆಗಳ ಸಂಗೀತಯುಕ್ತ ಇಷ್ಠಲಿಂಗ ಮಹಾಪೂಜೆಯನ್ನು ನೋಡುವ ಭಾಗ್ಯವನ್ನು ನಮಗೆಲ್ಲಾ ಕಲ್ಪಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬಿಳಿಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯಗಳು, ತೊಗರ್ಸಿ ಮಠದ ಶ್ರೀಚನ್ನವೀರ ದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು, ಕೋಣಂದೂರು ಬೃಹನ್ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿದ್ದರು. ಈ ಸಮಾರಂಭದಲ್ಲಿ ೫೦ ವರ್ಷ ದಾಂಪತ್ಯ ಜೀವನ ನಡೆಸಿದ ದಂಪತಿಗಳು ಹಾಗೂ ನೂತನ ವಧು-ವರರಿಗೆ ಜಗದ್ಗುರುಗಳಿಂದ ಗುರುರಕ್ಷೆ ನೀಡಲಾಯಿತು. ಪ್ರಾಸ್ತಾವಿಕವಾಗಿ ವಿಧಾನ ಪರಿಷತ್ ಸದಸ್ಯ ಡಾ|| ಧನಂಜಯ ಸರ್ಜಿ ಮಾತನಾಡಿದರು. ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ಬಿ. ಶಿವರಾಜ್ ವಹಿಸಿದ್ದರು.
ಪ್ರಮುಖರಾದ ಹೆಚ್.ಎಂ. ಚಂದ್ರಶೇಖರಪ್ಪ, ಹೆಚ್.ಸಿ. ಯೋಗೀಶ್, ಸಿ.ಎಸ್. ಷಡಾಕ್ಷರಿ, ಹೆಚ್.ವಿ. ಮಹೇಶ್ವರಪ್ಪ, ವಿರುಪಾಕ್ಷಪ್ಪ ಇನ್ನಿತರರಿದ್ದರು.


